ಅಮೆರಿಕದ ಕಚೇರಿಗಳನ್ನು ಖಾಲಿ ಮಾಡುತ್ತಿವೆ ಮೆಟಾ, ಮೈಕ್ರೋಸಾಫ್ಟ್‌ ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಹಿಂಜರಿತದ ಭೀತಿಯು ಮೈಕ್ರೋಸಾಪ್ಟ್‌, ಮೆಟಾದಂತಹ ಜಾಗತಿಕ ದಿಗ್ಗಜ ಕಂಪನಿಗಳನ್ನು ಕಾಡುತ್ತಿದ್ದು ಜಾಗತಿಕ ಆರ್ಥಿಕ ಕುಸಿತವನ್ನು ಎದುರಿಸಲು ಸಜ್ಜಾಗುತ್ತಿವೆ. ಉದ್ಯೋಗ ಕಡಿತದಂತಹ ವೆಚ್ಚ ಕಡಿತಗಳನ್ನು ಕೈಗೊಂಡಿರುವ ಕಂಪನಿಗಳೀಗ ಅಮರಿಕದ ಪ್ರಮುಖ ನಗರಗಳಲ್ಲಿನ ಕಚೇರಿಗಳನ್ನು ಖಾಲಿ ಮಾಡುತ್ತಿವೆ.

ವರದಿಯೊಂದರ ಪ್ರಕಾರ ಅಮೆರಿಕ ವಾಷಿಂಗ್ಟನ್‌ ರಾಜ್ಯದ ಸಿಯಾಟಲ್‌ ನಗರದಲ್ಲಿನ ಕಚೇರಿಯನ್ನು ಖಾಲಿ ಮಾಡಲು ಮೆಟಾ, ಮೈಕ್ರೋಸಾಫ್ಟ್‌ ಕಂಪನಿಗಳು ಮುಂದಾಗಿವೆ. ಉದ್ಯೋಗ ಕಡಿತದಿಂದ ಸಾವಿರಾರು ಉದ್ಯೋಗಿಗಳು ಕಂಪನಿಯಿಂದ ಹೊರಹಾಕಲ್ಪಟ್ಟಿದ್ದು ಇದರ ಜೊತೆ ವರ್ಕ್‌ ಫ್ರಂ ಹೋಮ್‌ ಗಳಿಂದ ರಿಮೋಟ್‌ ಕೆಲಸವು ಹೆಚ್ಚು ರೂಢಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಕೆಲಸ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವುದರಿಂದ ದಿಗ್ಗಜ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ.

ಮೆಟಾ ಸಿಯಾಟಲ್-ಪ್ರದೇಶದ ಕಚೇರಿ ಕಟ್ಟಡಗಳಿಗೆ ಗುತ್ತಿಗೆಯನ್ನು ಪರಿಶೀಲಿಸುತ್ತಿದೆ ಎಂದು ಸಿಯಾಟಲ್ ಟೈಮ್ಸ್ ವರದಿ ಮಾಡಿದೆ. ಫೇಸ್‌ಬುಕ್ ಡೌನ್‌ಟೌನ್ ಸಿಯಾಟಲ್‌ನಲ್ಲಿ ಮತ್ತು ಬೆಲ್ಲೆವ್ಯೂನಲ್ಲಿರುವ ಸ್ಪ್ರಿಂಗ್ ಡಿಸ್ಟ್ರಿಕ್ಟ್‌ನಲ್ಲಿ ತನ್ನ ಕಛೇರಿಗಳನ್ನು ಉಪಭೋಗ್ಯಕ್ಕೆ ನೀಡುವ ಯೋಜನೆಯನ್ನು ಹಾಕಿಕೊಂಡಿದೆ ಎನ್ನಲಾಗಿದೆ. ಬೆಲ್ಲವ್ಯೂ ಪ್ರದೇಶದಲ್ಲಿನ 26 ಅಂತಸ್ತಿನ ಕಚೇರಿಯ ಗುತ್ತಿಗೆಯು ಕೊನೆಗೊಂಡ ನಂತರ ಅದನ್ನು ನವೀಕರಿಸುವುದಿಲ್ಲ ಎಂದು ಮೈಕ್ರೋಸಾಫ್ಟ್‌ ಹೇಳಿದೆ ಎಂದು ವರದಿಯಾಗಿದೆ.

ಮನೆಯಿಂದ ನಡೆಯುತ್ತಿರುವ ಕೆಲಸ ಮತ್ತು ವಜಾಗೊಳಿಸುವಿಕೆಯು ಸಿಯಾಟಲ್ ಮತ್ತು ಯುಎಸ್‌ನ ಇತರ ಟೆಕ್ ನಗರಗಳಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯನ್ನು ಕಡಿತಗೊಳಿಸಿದೆ. ಟ್ವಿಟರ್ ಸಿಇಒ ಎಲೋನ್ ಮಸ್ಕ್ ಕಳೆದ ವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಚೇರಿ ಬಾಡಿಗೆಗಳು ಮತ್ತಷ್ಟು ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ. ಹೈಬ್ರೀಡ್‌ ಕೆಲಸ ಮತ್ತು ಉದ್ಯೋಗ ಕಡಿತಗಳಿಂದ ಅಮೆರಿಕದ ಪ್ರಮುಖ ನಗರಗಳಲ್ಲಿ ಕಚೇರಿ ಬಾಡಿಗೆಯು ಅತ್ಯಂತ ಅಗ್ಗವಾಗಿದ್ದು ಇದು ಇನ್ನಷ್ಟು ಕುಸಿಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!