May 15, 2026
Friday, May 15, 2026
spot_img

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಮೇ.17 ರಂದು ನೇರಳೆ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ​ 17ರಂದು ಭಾನುವಾರ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಈ ಕಾರಣದಿಂದಾಗಿ 2 ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಈ ಕುರಿತು ಪ್ರಯಾಣಿಕರಿಗೆ ಪ್ರಕಟಣೆ ಹೊರಡಿಸಿದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ (ಸೆಂಟ್ರಲ್ ಕಾಲೇಜ್) ನಡುವೆ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ ಭಾನುವಾರ ಬೆಳಗ್ಗೆ 07 ಗಂಟೆಯಿಂದ 09 ಗಂಟೆಯವರೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ.

ಆದಾಗ್ಯೂ, ಈ ಅವಧಿಯಲ್ಲಿ ನಿಯಮಿತ ವೇಳಾಪಟ್ಟಿಯಂತೆ ಚಲ್ಲಘಟ್ಟ – ವಿಜಯನಗರ, ಎಂ.ಜಿ. ರಸ್ತೆ – ವೈಟ್ ಫೀಲ್ಡ್, ಕಾಡುಗೋಡಿ, ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಆರ್.ವಿ. ರಸ್ತೆ – ಬೊಮ್ಮಸಂದ್ರ ಮಾರ್ಗದಲ್ಲಿ ಎಂದಿನಂತೆ ಸಂಚರಿಸಲಿವೆ ಎಂದು ತಿಳಿಸಿದೆ.

ಬೆಳಗ್ಗೆ 09 ಗಂಟೆಯ ಬಳಿಕ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಪುನಃ ಆರಂಭಗೊಳ್ಳಲಿವೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಪೂರ್ವಯೋಜನೆ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !