ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ರೋಚಕ ಹಂತದಲ್ಲಿ ನಡೆದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತವರಿನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಈ ಪಂದ್ಯದಲ್ಲಿ ಮುಂಬೈ 103 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 207 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಗೆಲುವಿನ ಹೀರೋ ಎಂದರೆ ಸಂಜು ಸ್ಯಾಮ್ಸನ್. ಅವರು ಕೇವಲ 54 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಳ್ಳಿದರು. ನಾಯಕ ರುತುರಾಜ್ ಗಾಯಕ್ವಾಡ್ 22 ರನ್‌ಗಳ ಕೊಡುಗೆ ನೀಡಿದರು. ಡೆವಾಲ್ಡ್ ಬ್ರೆವಿಸ್ ಮತ್ತು ಕಾರ್ತಿಕ್ ಶರ್ಮಾ ಕೂಡ ಉಪಯುಕ್ತ ರನ್ ಗಳಿಸಿದರು.
ಇದನ್ನೂ ಓದಿ:
ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಕುಸಿತ ಕಂಡಿತು. ಪವರ್‌ಪ್ಲೇಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಿಲಕ್ ವರ್ಮಾ 37 ರನ್ ಹಾಗೂ ಸೂರ್ಯಕುಮಾರ್ ಯಾದವ್ 35 ರನ್ ಗಳಿಸಿದರೂ ತಂಡವನ್ನು ಉಳಿಸಲು ಸಾಧ್ಯವಾಗಲಿಲ್ಲ. ಇತರ ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ಪ್ರತಿರೋಧ ಕಾಣಿಸಲಿಲ್ಲ.
ಚೆನ್ನೈ ಬೌಲಿಂಗ್ ದಾಳಿಯಲ್ಲಿ ಅಕೀಲ್ ಹುಸೇನ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ನೂರ್ ಅಹ್ಮದ್ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಚೆನ್ನೈ ತಂಡ ಮೂರನೇ ಗೆಲುವು ದಾಖಲಿಸಿದರೆ, ಮುಂಬೈಗೆ ಇದು ಐದನೇ ಸೋಲಾಗಿದೆ.



