ತಾಯಿಯ ಎದೆಹಾಲಿನಲ್ಲಿ ಮೈಕ್ರೋ ಪ್ಲಾಸ್ಟಿಕ್!:ಮಕ್ಕಳ ಆರೋಗ್ಯದ ಬಗ್ಗೆ ವಿಜ್ಞಾನಿಗಳಿಗೆ ಚಿಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಯಿಯ ಎದೆ ಹಾಲು ಮಗುವಿಗೆ ಆರೋಗ್ಯ ಕಾಪಾಡುವ ಅಮೃತ ಎಂದು ವೈದ್ಯರು ಪದೇ ಪದೇ ಹೇಳುತ್ತಾರೆ. ನಮ್ಮ ಹಿರಿಯರೂ ಇದನ್ನೇ ಹೇಳಿದ್ದಾರೆ. ಏಕೆಂದರೆ ತಾಯಿಯ ಹಾಲಿನಲ್ಲಿ ಕಲಬೆರಕೆ ಇಲ್ಲ. ಇದುವರೆಗೂ ಅದೇ ಯೋಚನೆಯಲ್ಲಿದ್ದ ಜನರಿಗೆ ಈಗ ತಾಯಿಹಾಲು ಕಲಬೆರಕೆ ಆಗಿದೆ ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ತಾಯಿಯ ಹಾಲಿನಲ್ಲಿ ‘ಮೈಕ್ರೋ ಪ್ಲಾಸ್ಟಿಕ್’ ಇರುವುದನ್ನು ಇಟಲಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಪಾಲಿಮರ್ಸ್ ನಿಯತಕಾಲಿಕದಲ್ಲಿ ತಾಯಿಯ ಹಾಲಿಗೆ ಸಂಬಂಧಿಸಿದ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಪ್ಯಾಕೇಜಿಂಗ್‌ನಲ್ಲಿ ಬಳಸಲಾದ ಪಾಲಿಥಿಲೀನ್, ಪಿವಿಸಿ ಮತ್ತು ಪಾಲಿಪ್ರೊಪಿಲೀನ್‌ಗಳು ಎದೆ ಹಾಲಿನಲ್ಲಿ ಕಂಡುಬಂದಿವೆ ಎಂದು ಸಂಶೋಧನೆ ಹೇಳಿದೆ. ಸಂಶೋಧನೆಗಾಗಿ, ಇಟಲಿಯ ರೋಮ್‌ನಲ್ಲಿ, 34 ಆರೋಗ್ಯವಂತ ತಾಯಂದಿರ ಎದೆ ಹಾಲನ್ನು ಸಂಗ್ರಹಿಸಲಾಗಿದೆ. ಅವರೆಲ್ಲ ಮಗು ಹುಟ್ಟಿದ ಒಂದು ವಾರದ ಬಳಿಕ ಹಾಲನ್ನು ಸಂಶೋಧನೆಗೆ ಕೊಟ್ಟರು. ಈ ವೇಳೆ 75 ರಷ್ಟು ಮೈಕ್ರೋಪ್ಲಾಸ್ಟಿಕ್‌ಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಮೈಕ್ರೊಪ್ಲಾಸ್ಟಿಕ್‌ಗಳಿಂದ ಮಾನವ ಜೀವಕೋಶಗಳು, ಪ್ರಾಣಿಗಳು ಮತ್ತು ವನ್ಯಜೀವಿಗಳಿಗೆ ಉಂಟಾಗುವ ಹಾನಿಯನ್ನು ಹಿಂದೆ ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಪ್ಲಾಸ್ಟಿಕ್ ಅನೇಕ ಮಾಲಿನ್ಯಕಾರಕಗಳನ್ನು ಒಳಗೊಂಡಿದೆ. ಈಗ ಅವು ಎದೆ ಹಾಲಿನಲ್ಲಿಯೂ ಕಂಡುಬಂದಿವೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿನ ಆಹಾರ, ಸೀ ಫುಡ್‌ ತಿನ್ನುವುದಕ್ಕೂ ಎದೆ ಹಾಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದಕ್ಕೂ ಸಂಬಂಧವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಇದೀಗ ಎದೆಹಾಲು ಮಕ್ಕಳಿಗೆ ಕೊಡಬೇಡಿ ಎಂದು ಹೇಳುವುದು ನಮ್ಮ ಸಂಶೋಧನೆಯ ಉದ್ದೇಶವಲ್ಲ, ರಾಜಕೀಯ ನಾಯಕರು, ಜನ ಎಲ್ಲರೂ ಸೇರಿ ಪರಿಸರವನ್ನು ರಕ್ಷಿಸಿ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ನಾವು ಕಾನೂನುಗಳಿಗೆ ಕರೆ ನೀಡುತ್ತಿದ್ದೇವೆ ಎಂದು ಇಟಲಿಯ ಆಂಕೋನಾ ವಿಶ್ವವಿದ್ಯಾಲಯದ ಪಾಲಿಟೆಕ್ನಿಕಾ ಡೆಲ್ಲೆ ಮಾರ್ಚೆಯ ಡಾ. ವ್ಯಾಲೆಂಟಿನಾ ನೋಟರ್ಸೆಟ್ಫಾನೊ ಹೇಳಿದರು.

ಈ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದು, ಹುಟ್ಟುವ ಮಕ್ಕಳು, ತಾಯಂದಿರು ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಸಂಶೋಧಕರು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!