ಹೊಸದಿಗಂತ ವರದಿ, ಕುಶಾಲನಗರ:
ಕೊಡಗಿನ ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಡಿ ಇಟ್ಟಿದ್ದು, ಈ ಬಾರಿಯ ಬಜೆಟ್’ನಲ್ಲಿ 15 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಮಾಡುವ ಸರಕಾರದ ಚಿಂತನೆಯಂತೆ ಕೊಡಗು ಜಿಲ್ಲೆಯಲ್ಲೂ ಮಿನಿ ವಿಮಾನ ನಿಲ್ದಾಣ ಅರಂಭಿಸಲು ಕಳೆದ 5 ವರ್ಷಗಳಿಂದಲೂ ವಿವಿಧ ಜಾಗಗಳ ಪರಿಶೀಲನೆ ನಡೆಸಲಾಗಿತ್ತು.. ಅದರಂತೆ ಕಳೆದ ನಾಲ್ಕು ವರ್ಷಗಳಿಂದಲೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿಧಾನ ಸಭೆಯಲ್ಲೂ ಅನೇಕ ಬಾರಿ ಸರಕಾರದ ಗಮನಸೆಳೆದಿದ್ದರು.
ಇದಕ್ಕೆ ಪೂರಕ ಎಂಬಂತೆ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಮಾಡುವುದಕ್ಕಾಗಿ ಈ ಬಾರಿಯ ಬಜೆಟ್’ನಲ್ಲಿ 15 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚುರಂಜನ್ ಅವರು, ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಅರಂಭಿಸುವ ಸಂಬಂಧ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ, ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳುವಾರ ಮತ್ತು ಕೂಡಿಗೆಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಜಾಗಗಳನ್ನು ಕೇಂದ್ರ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಅವರ ತಂಡ ಸ್ಧಳ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.ಈ ಪೈಕಿ ಕೂಡಿಗೆಯ ಕೃಷಿ ಕ್ಷೇತ್ರದ 165 ಎಕರೆಗಳಷ್ಟು ಪ್ರದೇಶದ ಜಾಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉತ್ತಮವಾಗಿರುವುದಾಗಿ ವರದಿ ನೀಡಿದ್ದಾರೆ. ಅದರಂತೆ ಸಂಬಂಧಿಸಿದ ಇಲಾಖೆ ವತಿಯಿಂದ ಪತ್ರ ವ್ಯವಹಾರ ಮತ್ತು ಯೋಜನೆ ಕಾರ್ಯಗತಗೊಳಿಸಲು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬಜೆಟ್’ನಲ್ಲಿ 15 ಕೋಟಿ ರೂ.ಗಳನ್ನು ಮಿನಿ ವಿಮಾನ ನಿಲ್ದಾಣಕ್ಕೆ ಕಾದಿರಿಸಿರುವ ಹಿನ್ನೆಲೆಯಲ್ಲಿ ಯೋಜನೆಯ ಪ್ರಾಥಮಿಕ ಹಂತದ ಕಾರ್ಯಗಳು ಅರಂಭವಾಗಲಿವೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕೂಡಾ ಕೂಡಿಗೆ ಕೃಷಿ ಕ್ಷೇತ್ರದ ಸ್ಧಳ ಪರಿಶೀಲನೆ ನೆಡೆಸಿದ್ದಾರೆ ಎಂದು ಅಪ್ಪಚ್ಚುರಂಜನ್ ವಿವರಿಸಿದರು.
ಮಿನಿ ವಿಮಾನನಿಲ್ದಾಣದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೆಚ್ಚಿನ ಅನುಕೂಲವಾಗಲಿದೆ. ಮತ್ತು ರಾಜ್ಯ ಮತ್ತು ರಾಷ್ಟ್ರದ ಮಟ್ಟದ ವ್ಯವಹಾರಗಳಿಗೂ ಕೊಡಗು ತೆರೆದುಕೊಳ್ಳಲಿದೆ ಎಂದು ನುಡಿದರು.