ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ: ಹಿರಿಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಹೊಸದಿಗಂತ ವರದಿ,ಕುಶಾಲನಗರ:

ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ 49 ಎಕರೆಗಳಷ್ಟು ಖಾಲಿ ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್ ರವಿ ಸೇರಿದಂತೆ ಇಲಾಖೆಯ ತಾಂತ್ರಿಕ ತಂಡ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಕೇಂದ್ರ ಸರ್ಕಾರದದ ವಿಮಾನ ನಿಲ್ದಾಣ ಪ್ರಾಧಿಕಾರವು ಕರ್ನಾಟಕ ರಾಜ್ಯಕ್ಕೆ ಹೊಸದಾಗಿ ಮಂಜೂರು ಮಾಡಿರಾಗಿರುವ ಮೂರು ಮಿನಿ ವಿಮಾನ ನಿಲ್ದಾಣಗಳಲ್ಲಿ ಚಿಕ್ಕಮಗಳೂರು, ಹಂಪಿ, ಕೊಡಗು ಸೇರಿದ್ದು, ರಾಜ್ಯ ಸರಕಾರದ ಈ ಸಾಲಿನ ಮುಂಗಡ ಪತ್ರದಲ್ಲಿ ಹಣವನ್ನು ಕಾಯ್ದಿರಿಸಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಿನಿ ವಿಮಾನ ನಿಲ್ದಾಣಕ್ಕೆ ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ಎರಡು ಬಾರಿ ಜಿಲ್ಲೆಗೆ ಅಗಮಿಸಿ ವಿವಿಧ ಜಾಗಗಳ ಪರಿಶೀಲನೆ ನಡೆಸಿತ್ತು.
ಆದರೆ ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಕೃಷಿ ಕ್ಷೇತ್ರದ ಜಾಗವು ಮಿನಿ ವಿಮಾನ ನಿಲ್ದಾಣಕ್ಕೆ‌ ಸೂಕ್ತವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿರುವ ಕೂಡಿಗೆಯ ಕೃಷಿ ಕ್ಷೇತ್ರದ ಅವರಣದಲ್ಲಿನ 165 ಎಕರೆ ಪ್ರದೇಶದ ಪೈಕಿ ಅಗತ್ಯವಿರುವ ಖಾಲಿ ಜಾಗವನ್ನು ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಶಾಸಕ ಅಪ್ಪಚ್ಚು ರಂಜನ್ ಸರಕಾರದ ಗಮನಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ಆರ್. ರವಿ ಅವರು ವಿವಿಧ ತಾಂತ್ರಿಕ ಅಧಿಕಾರಿಗಳೊಂದಿಗೆ ಸ್ಧಳ ಪರಿಶೀಲನೆ ನಡೆಸಿ, ಕೃಷಿ ಇಲಾಖೆ ವತಿಯಿಂದ ಜಾಗದ ಸಮಗ್ರವಾದ ವರದಿಯನ್ನು ನೀಡುವಂತೆ ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಅರಂಭಿಸಲು ಅನೇಕ ಪ್ರಯತ್ನಗಳ ನಡೆದಿದ್ದವು. ರಾಜ್ಯ ಮಟ್ಟದ ವಿಮಾನಯಾನ ಇಲಾಖೆಯ ತಂಡವನ್ನು ಎರಡು ಬಾರಿ ಕರೆಸಿ ನಾಲ್ಕು ಕಡೆಗಳಲ್ಲಿ ಜಾಗದ ಪರಿಶೀಲನೆ ನಡೆಸಲಾಗಿತ್ತು. ಕೊನೆಯದಾಗಿ ಕೂಡಿಗೆಯ ಕೃಷಿ ಕ್ಷೇತ್ರದ ಜಾಗದ 49 ಎಕರೆಗಳಷ್ಟು ಪ್ರದೇಶವನ್ನು ಕಾಯ್ದಿರಿಸಲಾಗಿದ್ದು, ಅದರಂತೆ ಮೊದಲ ಹಂತದ ಯೋಜನೆಗೆ ಅಧಿಕಾರಿ ವರ್ಗದವರು ಕಾರ್ಯೋನ್ಮುಖರಾಗಿರುವುದಾಗಿ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್ ರವಿ ತಿಳಿಸಿದರು.
ರಾಜ್ಯ ಸರ್ಕಾರ ಈ ಬಾರಿ ಹೊಸ ಮಿನಿ ವಿಮಾನ ನಿಲ್ದಾಣ ಆರಂಭಿಸಲು ಬಜೆಟ್’ನಲ್ಲಿ ಹಣವನ್ನು ಕಾಯ್ದಿರಿಸಿ ರಾಜ್ಯದ ಮೂರು ಕಡೆಗಳಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಜಾಗ ಇಲ್ಲದ ಕಾರಣ ಕುಶಾಲನಗರ ಸಮೀಪದ ಕೂಡಿಗೆ ಸೈನಿಕ ಶಾಲೆಯ ಪಕ್ಕದ ಕೃಷಿ ಇಲಾಖೆಯ ಜಾಗದಲ್ಲಿ, ಸಣ್ಣ ಪ್ರಮಾಣದ 20 ಜನರು ಪ್ರಯಾಣಿಸಬಹುದಾದ ವಿಮಾನಗಳ ನಿಲ್ದಾಣ ಆರಂಭಿಸುವ ಕಾರ್ಯ ಸಾಧ್ಯತೆಯ ವರದಿ ತಯಾರಿಸಲು ತಾಂತ್ರಿಕ ತಂಡದೊಂದಿಗೆ ಬಂದಿರುವುದಾಗಿ ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿ ನಂತರ ಪ್ರಸ್ತಾವನೆಯನ್ನು ಆಧರಿಸಿ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುವುದು. ಈ ಸ್ಧಳದಲ್ಲಿ ಮಿನಿ ವಿಮಾನ ನಿಲ್ದಾಣದ ಜೊತೆಯಲ್ಲಿ ಏವಿಯೇಷನ್ ತರಬೇತಿ ಘಟಕವನ್ನು ಆರಂಭ ಮಾಡಲು ಸ್ಧಳ ಇರುವುದರಿಂದ ಯೋಜನೆಯ ಬಗ್ಗೆ ಪ್ರಾಥಮಿಕ ಹಂತದ ವರದಿ ಬಂದ ನಂತರ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಮೂರು ಜನರ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಗಳನ್ನು ನೀಡಿದ ನಂತರ ಯೋಜನೆಯ ರೂಪುರೇಷಗಳನ್ನು ಸಿದ್ಧಪಡಿಸಲಾಗುವುದು ಎಂದರು.
ನೀರಿನ ಮೇಲೆ ನಿಲ್ದಾಣ: ಸಮೀಪದಲ್ಲೇ ಹಾರಂಗಿ ಅಣೆಕಟ್ಟೆ ಇರುವುದರಿಂದ ಕೇಂದ್ರ ಪ್ರವಾಸಿಗರಿಗೂಯೋಜನೆಯಡಿ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ನೂತನ ಅಧುನಿಕ ತಂತ್ರಜ್ಞಾನದ ಮೂಲಕ ನೀರಿನ ಮೇಲೆ ನಿಲ್ಲುವ ಮಿನಿ ವಿಮಾನ ನಿಲ್ದಾಣವನ್ನು ಅರಂಭಿಸುವ ಚಿಂತನೆಯೂ ಇರುವುದಾಗಿ ರವಿ ನುಡಿದರು.
ಮುಂದಿನ ದಿನಗಳಲ್ಲಿ ಪ್ರಮುಖ ಅಧಿಕಾರಿ ತಂಡದೊಂದಿಗೆ ಹಾರಂಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರಾವರಿ ನಿಗಮದೊಂದಿಗೆ ಸಮಗ್ರವಾದ ಚರ್ಚೆ ನಡೆಸಿ ವರದಿ ಅಧಾರದ ಮೇಲೆ ಯೋಜನೆ ರೂಪಿಸಲಾಗುವುದು ಎಂದು ಹೊಸ ಯೋಜನೆ ಬಗ್ಗೆ ಅವರು ತಿಳಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರು ಮಾತನಾಡಿ ಬಹು ದಿನಗಳ ಬೇಡಿಕೆಯಂತೆ ಕಳೆದ 10 ವರ್ಷಗಳಿಂದ ಅನೇಕ ಬಾರಿ ವಿಧಾನ ಸಭೆಯಲ್ಲಿ ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಪ್ರಸ್ತಾಪಿಸುತ್ತಾ ಬರಲಾಗಿತ್ತು.
ಇದರೊಂದಿಗೆ ವಿಮಾನಯಾನ ಇಲಾಖೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅದರಂತೆ ಈ ಸಾಲಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಬಜೆಟ್ ‘ನಲ್ಲಿ ಹೊಸ ಮಿನಿ ವಿಮಾನ ನಿಲ್ದಾಣ ಅರಂಭಿಸಲು ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಸ್ಧಳ ಪರಿಶೀಲನೆ ನಡೆಸಿ ಈಗಾಗಲೇ ಗುರುತಿಸಲಾದ್ದ ಕೂಡಿಗೆ ಕೃಷಿ ಕ್ಷೇತ್ರದ 49 ಎಕರೆಗಳಷ್ಟು ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿ ಜಾಗವನ್ನು ಮತ್ತು ಹಣವನ್ನು ಮಿನಿ ವಿಮಾನಯಾನ ಇಲಾಖೆಗೆ ಒದಗಿಸಲು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಯಗತಗೊಳಿಸಲು ಪ್ರಯತ್ನ ಮಾಡಲಾಗುವುದು. ಇದರಿಂದಾಗಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದ ಕೊಡಗಿಗೆ ಆಗಮಿಸುವವರು ಹಾಗೂ ಪ್ರವಾಸಿಗರಿಗೂ ಬಾರಿ ಅನುಕೂಲವಾಗಲಿದೆ. ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ತೆರೆಯಲು ಎಲ್ಲಾ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಲಹಾ ಸಮಿತಿಯ ಹಿರಿಯ ಅಧಿಕಾರಿ ಬ್ರಿಗೇಡಿಯರ್ ಪೂರ್ವಿಮಠ, ನಿಗಮದ ಇ ಡಿ ಎ ಅಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಉಪ ವಿಭಾಗಾಧಿಕಾರಿ ಯತೀಶ್, ಕೈಗಾರಿಕಾ ನಿಗಮದ ಜಂಟಿ ನಿರ್ದೇಶಕ ಶಂಕರನಾರಾಯಣ, ಕುಶಾಲನಗರ ತಾಲೂಕು ತಹಶೀಲ್ದಾರ ಪ್ರಕಾಶ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು, ಕುಶಾಲನಗರ ಕೂಡಾ ಅಧ್ಯಕ್ಷ ಚರಣ್, ಕುಶಾಲನಗರ ಬಿ.ಜೆ.ಪಿ ನಗರ ಅಧ್ಯಕ್ಷ ಉಮಾಶಂಕರ್, ಕೃಷಿ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಕಂದಾಯ ಇಲಾಖೆ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಕೆ.ಭೋಗಪ್ಪ, ದಿನೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು, ಮತ್ತು ಕೂಡುಮಂಗಳೂರು ಕುಶಾಲನಗರ ವ್ಯಾಪ್ತಿಯ ಬಿಜೆಪಿಯ ವಿವಿಧ ಘಟಕದ ಪದಾಧಿಕಾರಿಗಳು ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!