ಅನುದಾನಗಳ ಸಮರ್ಪಕ ಬಳಕೆಗೆ ಸಚಿವ ಕೋಟ ಸೂಚನೆ

ಹೊಸದಿಗಂತ ವರದಿ,ಮಂಗಳೂರು:

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಮತ್ತು ಸದುದ್ದೇಶಕ್ಕೆ ಬಳಕೆಯಾಗಬೇಕು. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕರ್ತವ್ಯ ನಿರ್ವಹಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಅವರು ಸೋಮವಾರ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖೆಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯ 28 ಲಕ್ಷ ಕುಟುಂಬಗಳ ಪೈಕಿ ಬಹುತೇಕ ಮಂದಿ ನಿವೇಶನ ವಂಚಿತರಾಗಿದ್ದಾರೆ. ದ.ಕ. ಜಿಲ್ಲೆಯಲ್ಲೂ ಹಲವು ಮಂದಿ ನಿವೇಶನ ವಂಚಿತರಿದ್ದು, ಈ ನಿಟ್ಟಿನಲ್ಲಿ ಸರ್ವೆ ಕಾರ್ಯ ಕೈಗೆತ್ತಿಕ್ಕೊಳ್ಳಬೇಕು. ಜಿಲ್ಲೆಯಲ್ಲಿರುವ ಪರಿಶಿಷ್ಟ ಸಮುದಾಯಗಳ ಪೈಕಿ ಎಷ್ಟು ಮಂದಿ ನಿವೇಶನ ವಂಚಿತರಾಗಿದ್ದಾರೆ ಎಂಬುದರ ಸರ್ವೆ ನಡೆಸಿ ವರದಿಯನ್ನು ವಾರದೊಳಗೆ ಒಪ್ಪಿಸುವಂತೆ ಸಚಿವ ಕೋಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿದಂತೆ ಬಿಪಿಎಲ್ ಕಾರ್ಡು ಹೊಂದಿರುವ 24.5 ಲಕ್ಷ ಮಂದಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ದೊರೆಯಲಿದೆ. ಇದರಿಂದ ನಮ್ಮ ಇಲಾಖೆಗೆ 640 ಕೋಟಿ ವೆಚ್ಚವಾಗಲಿದೆ. ಬಡವರ ಆರ್ಥಿಕ ಮತ್ತು ಶೈಕ್ಷಣಿಕ ಸ್ವಾವಲಂಬನೆಯ ಹಿತದೃಷ್ಟಿಯಿಂದ ಜಾರಿಯಾಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲೆಯ ಅಧಿಕಾರಿಗಳು ವಿಶೇಷ ಒತ್ತು ನೀಡಬೇಕು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ಯಶಸ್ವಿನಿ ಯೋಜನೆಯಡಿ ಯಾವ ರೀತಿಯಾಗಿ ತರಲು ಸಾಧ್ಯ ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಆಯುಕ್ತ ಕೆ.ಎ.ದಯಾನಂದ, ಸಮಾಜ ಕಲ್ಯಾಣ ಇಲಾಖಾ ಆಯುಕ್ತ ಡಾ. ಕೆ. ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿ.ಪಂ.ಸಿಇಒ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪಮೇಯರ್ ಸುಮಂಗಳಾ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!