‘ಕನ್ನಡ ಶಾಲಾ ಮಕ್ಕಳ ಹಬ್ಬ’ಕ್ಕೆ ಸಚಿವ ಬಿ.ಸಿ.ನಾಗೇಶ್ ಚಾಲನೆ

ಹೊಸದಿಗಂತ ವರದಿ,ಮಂಗಳೂರು:

ಕನ್ನಡ ಭಾಷೆ ಉಳಿದರೆ ಮಾತ್ರ ಈ ರಾಜ್ಯದ ಉಳಿವು ಸಾಧ್ಯ. ಇಂದು ರಾಜ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಕನ್ನಡ ಶಾಲೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಇವೆಲ್ಲದಕ್ಕೆ ಪುನಃಶ್ಚೇತನ ನೀಡುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ‘ಕನ್ನಡ ಶಾಲಾ ಮಕ್ಕಳ ಹಬ್ಬ’ ಬೃಹತ್ ವಿದ್ಯಾರ್ಥಿ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಭಾಷೆಯ ಬಗ್ಗೆ ಅಭಿಮಾನದಿಂದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಮಾದರಿ ಮತ್ತು ಅರ್ಥಪೂಣ ಕಾರ್ಯಕ್ರಮವನ್ನು ಆಯೋಜಿಸಿದೆ. ಬಹುತೇಕ ಮಂದಿಯಲ್ಲಿ ಕನ್ನಡ ಶಾಲೆಗಳ ಬಗ್ಗೆ ಇರುವ ಕೀಳರಿಮೆ ಮತ್ತು ಈ ನಿಟ್ಟಿನ ಮಾನಸಿಕತೆ ದೂರಮಾಡಲು ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ. ಈಗಾಗಲೇ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬುದಕ್ಕೆ ಮೊದಲ ಆದ್ಯತೆ ನೀಡಿದೆ ಎಂದವರು ಹೇಳಿದರು.

ಸರಕಾರಿ ಶಾಲೆಗಳಿಗೆ ಸರಕಾರ ಉತ್ತೇಜನ ನೀಡುತ್ತಿದ್ದು, ವಾರದ ಹಿಂದೆ, ಒಂದೇ ದಿನ ರಾಜ್ಯದಾದ್ಯಂತ 7601  ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಭಾಷೆ ಉಳಿದರೆ ಮಾತ್ರ ಈ ನಾಡು, ಸಂಸ್ಕೃತಿಯ ಉಳಿವು. ಈ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದವರು ಹೇಳಿದರು.

ಭಾರತೀಯ ಶಿಕ್ಷಣ ಪದ್ಧತಿ ಮಕ್ಕಳಿಗೆ ಸಿಗಬೇಕೆಂಬ ನೆಲೆಯಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ದೊರೆಯುವುದರೊಂದಿಗೆ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಅರಿಯಲು ಸಾಧ್ಯವಾಗುತ್ತದೆ. ಎನ್‌ಇಪಿ ಶಿಕ್ಷಣ ಪದ್ಧತಿ ಈ ದೇಶದ ನೈಜ ಇತಿಹಾಸವನ್ನು ಮಕ್ಕಳಿಗೆ ತಿಳಿಸಲಿದೆ. 3 ರಿಂದ 8 ನೇ ವಯಸ್ಸಿನವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯಲಿದೆ ಎಂದು ಸಚಿವರು ಹೇಳಿದರು.

ಯಾವುದೇ ಮಗು ಕೂಡ ಕನ್ನಡದ ಬಗ್ಗೆ ಕೀಳರಿಮೆ ಹೊಂದಬಾರದು. ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಕಾರ್ಯವನ್ನು ಹೆತ್ತವರು ಮತ್ತು ಶಿಕ್ಷಕರು ಮಾಡಬೇಕು. ಇದುವರೆಗಿನ ಪಠ್ಯಗಳಲ್ಲಿ ಇತಿಹಾಸದ ಬಗೆಗೆ ಸುಳ್ಳು ಮಾಹಿತಿಗಳೇ ತುಂಬಿದ್ದವು. ಎನ್‌ಇಪಿ ಮೂಲಕ ಇದೆಲ್ಲವನ್ನು ದೂರ ಮಾಡಿ, ಈ ದೇಶದ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನವಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಕನ್ನಡ ಶಾಲೆಯ ಸೋಲು ಅದು ನಮ್ಮ ಭಾಷೆ, ಸಂಸ್ಕೃತಿಯ ಸೋಲು. ಹಾಗಾಗಿ ಕನ್ನಡ ಶಾಲೆಗಳು ಎಂದೂ ಸೋಲದಂತೆ ನೋಡಿಕೊಳ್ಳಬೇಕು. ಕನ್ನಡವನ್ನು ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡ ಮಾಧ್ಯಮ ಶಾಲೆಗಳು ಸವಕಲು ನಾಣ್ಯವಾಗದಂತೆ ಎಚ್ಚರವಹಿಸಬೇಕು ಎಂದರು.

ಐಎಎಸ್ ಅಧಿಕಾರಿ ಯುಪಿಎಸ್‌ಸಿಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದ ನಂದಿನಿ ಕೆ.ಆರ್. ಮಾತನಾಡಿ, ಮೊದಲು ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು. ಸಾಧನೆಗೆ ಭಾಷೆ ಅಥವಾ ಕಲಿಯುವ ಮಾಧ್ಯಮ ಎಂದೂ ಅಡ್ಡಿಯಾಗದು. ನಮ್ಮಲ್ಲಿರುವ ಶಕ್ತಿ ಏನೆಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ.ವಾಮನ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ಕೆ.ಸಿ.ನಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಆಶಯ ಭಾಷಣ ಮಾಡಿದರು. ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಹ ಕಾರ್ಯದಶಿ ರಮೇಶ್ ಕೆ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!