ಭೂಕುಸಿತಕ್ಕೊಳಗಾದ ಪ್ರದೇಶಕ್ಕೆ ಸಚಿವ ಬಿ.ಸಿ.ನಾಗೇಶ್ ಭೇಟಿ

ಹೊಸದಿಗಂತ ವರದಿ, ಮಡಿಕೇರಿ:

ಮದೆನಾಡು ಸಮೀಪದ ಸೀಮೆಹುಲ್ಲು ಕಜೆ ಗುಡ್ಡದ ಬದಿಯೊಂದು ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಭಾನುವಾರ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದರು.
ಈ ಪ್ರದೇಶದಲ್ಲಿ ಮೂರು ಕುಟುಂಬಗಳು ವಾಸ ಮಾಡುತ್ತಿದ್ದು,. ಸದ್ಯ ಮಳೆಗಾಲ ಮುಗಿಯುವವರೆಗೆ ಸಂಬಂಧಿಕರ ಮನೆಗೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು.
ಜಾನುವಾರುಗಳಿಗೂ ಮೇವು ಒದಗಿಸಲಾಗುವುದು. ತಮ್ಮ ಜೀವ ಮತ್ತು ಜೀವನ ಅತಿ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೂಡಲೇ ಸ್ಥಳಾಂತರ ಆಗುವಂತೆ ಸಚಿವರು ಸಲಹೆ ಮಾಡಿದರು.
ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಸದ್ಯ ಸ್ಥಳಾಂತರ ಆಗುವುದು ಒಳ್ಳೆಯದು ಎಂದು ಅವರು ತಿಳಿಸಿದರು.
ಮುಂಗಾರು ಸಂದರ್ಭದಲ್ಲಿ 2018ರಲ್ಲಿ ಇದೇ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿತ್ತು, ಈ ಬಾರಿಯೂ ಇದೇ ಸ್ಥಳದಲ್ಲಿ ಭೂ ಕುಸಿತ ಸಂಭವಿಸಿದೆ. ಆದ್ದರಿಂದ ಮಳೆಗಾಲ ಮುಗಿದ ನಂತರ ತಜ್ಞರ ತಂಡವನ್ನು ಆಹ್ವಾನಿಸಿ ವರದಿ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನರು ಸಂಕಷ್ಟ ಅನುಭವಿಸಿದ್ದಾರೆ. ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ತುತ್ತಾಗುತ್ತಿರುವ ಬಗ್ಗೆ ಮತ್ತೊಂದು ಬಾರಿ ತಜ್ಞರಿಂದ ಅಧ್ಯಯನ ವರದಿ ಪಡೆಯಲಾಗುವುದು ಎಂದು ಬಿ.ಸಿ.ನಾಗೇಶ್ ಅವರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಸಂಬಂಧಿಕರ ಮನೆಗೆ ತೆರಳಿದಲ್ಲಿ, ಸಂಬಂಧಿಕರು ಸೇರಿದಂತೆ ಸಂತ್ರಸ್ತರಿಗೆ ಆಹಾರ ಕಿಟ್ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು, ಸದ್ಯ ಆಗಸ್ಟ್ ಅಂತ್ಯದವರೆಗೆ ಸಂಬಂಧಿಕರ ಮನೆಯಲ್ಲಿ ಇರುವಂತೆ ಸ್ಥಳಿಯರಲ್ಲಿ ಕೋರಿದರು.
ಸೇತುವೆ ಪರಿಶೀಲನೆ: ನಂತರ ಜೊಡುಪಾಲ ಸಮೀಪದಲ್ಲಿ ಮಳೆ ಹಾನಿಗೆ ತುತ್ತಾದ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲಿಸಿದರು. ಸೇತುವೆಯನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟ ಎಂಜಿನಿಯರ್’ಗೆ ಸೂಚಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್, ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!