Saturday, February 24, 2024

ಭಾಗಮಂಡಲದಲ್ಲಿ ಪಿಂಡ ಪ್ರದಾನ-ಶಾಂತಿ ಪೂಜೆಗೆ ಅವಕಾಶ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

ಹೊಸದಿಗಂತ ವರದಿ, ಕೊಡಗು:

ಕೊಡಗಿನ ಪುಣ್ಯಕ್ಷೇತ್ರ ಭಾಗಮಂಡಲದಲ್ಲಿ ಕೋವಿಡ್ ನಿಯಮಾವಳಿಗೆ ಒಳಪಟ್ಟು ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಶಾಸಕ ಎಂ.ಪಿ.ಅಪಚ್ಚುರಂಜನ್ ಅವರು ಮಾತನಾಡಿ ಕೋವಿಡ್ ನಿಯಮಗಳನ್ನು ಅನುಸರಿಸಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಅವಕಾಶ ಮಾಡಬೇಕು ಎಂದು ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಪ್ರತಿನಿತ್ಯ 10 ರಿಂದ 15 ಕುಟುಂಬಗಳು ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಆಗಮಿಸಲಿದ್ದು, ಈ ಕಾರ್ಯಕ್ಕೆ ಅವಕಾಶ ಮಾಡಬೇಕು. ಸ್ಥಳೀಯರಿಗೆ ಪೂಜಾ ಕಾರ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ ಪಿಂಡ ಪ್ರದಾನ ಹಾಗೂ ಶಾಂತಿ ಪೂಜೆಗೆ ಅವಕಾಶ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಕೋವಿಡ್ ನಿಯಮಾವಳಿಗೆ ಒಳಪಟ್ಟು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಿಂಡ ಪ್ರದಾನ ಮತ್ತು ಶಾಂತಿ ಪೂಜೆಗೆ ಅವಕಾಶ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ರೆಸಾರ್ಟ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಇದ್ದರೆ ರೆಸಾರ್ಟ್ ಕೂಡ ಒಂದು ವಾರ ಬಂದ್ ಮಾಡಲು ಸಚಿವರು ಆದೇಶಿಸಿದರು.
ಪ್ರವಾಹ ಸಂತ್ರಸ್ತರಿಗೆ ಪರಿಹಾರ: ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ನೆಲ್ಯಹುದಿಕೇರಿ, ಅಭ್ಯತ್‍ಮಂಗಲ ಭಾಗದಲ್ಲಿ ಪ್ರವಾಹಕ್ಕೆ ತುತ್ತಾಗುವ ಕುಟುಂಬಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ 30 ರಿಂದ 40 ಎಕರೆ ಪೈಸಾರಿ ಜಾಗ ಗುರುತಿಸಲಾಗಿದೆ. ಆ ನಿಟ್ಟಿನಲ್ಲಿ ಆರ್‍ಟಿಸಿ ಒದಗಿಸುವಂತಾಗಬೇಕು ಎಂದು ಹೇಳಿದರು.
ಧ್ವನಿಗೂಡಿಸಿದ ಕೆ.ಜಿ.ಬೋಪಯ್ಯ ಅವರು ಸಿದ್ದಾಪುರ ಮತ್ತು ಕರಡಿಗೋಡುವಿನ ಪ್ರವಾಹ ಪೀಡಿತ ಕುಟುಂಬಗಳಿಗೆ ನೆಲೆ ಒದಗಿಸಬೇಕಿದೆ. ಹಾಗೆಯೇ ಅಯ್ಯಪ್ಪ ಬೆಟ್ಟದಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸಬೇಕಿದೆ. ಅವರಿಗೆ ಜಾಗ ಒದಗಿಸಬೇಕಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಮಳೆ ಹಾನಿಗೆ ತುತ್ತಾದ ಮನೆಗಳಿಗೆ ಪರಿಹಾರ ವಿತರಿಸಬೇಕು. ಬೆಳೆ ಹಾನಿ ಪರಿಹಾರ ಸಂಬಂಧಿಸಿದಂತೆ ಸರ್ಕಾರ ಇದುವರೆಗೆ 13ನೇ ಹಂತದಲ್ಲಿ 63.59 ಕೋಟಿ ರೂ. ಬಿಡುಗಡೆ ಮಾಡಿ ಅರ್ಹರಿಗೆ ವರ್ಗಾವಣೆಯಾಗಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!