ಸ್ಪೀಕರ್ ಸ್ಥಾನದ ಕುರಿತು ಸಚಿವ ಜಮೀರ್ ಹೇಳಿಕೆ: ವಿಧಾನಸಭೆಯಲ್ಲಿ ಬಿಜೆಪಿಯಿಂದ ಗದ್ದಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಪೀಕರ್ ಸ್ಥಾನದ ಕುರಿತು ಹೇಳಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ವಿಪಕ್ಷಗಳು ಗದ್ದಲ ಎಬ್ಬಿಸಿದೆ.

ಸದನ ಇಂದು ಬೆಳಗ್ಗೆ ಸಮಾವೇಶಗೊಂಡಾಗ ಸ್ಪೀಕರ್ ಯು ಟಿ ಖಾದರ್ ಅವರು ಪ್ರಶ್ನೋತ್ತರ ಆರಂಭಿಸಿದರು. ಆಗ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಜಮೀರ್ ಅಹಮ್ಮದ್ ಖಾನ್ ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಅವರು ರಾಜ್ಯದ ಜನರ ಭಾವನೆ ಕೆದಕಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಕೊಡಲ್ಲ. ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ವಜಾ ಮಾಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಈ ವೇಳೆ, ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ನಾವೇನು ಗುಲಾಮರಾ? ಎಂದು ವಾಗ್ದಾಳಿ ನಡೆಸಿದರು. ಅಶೋಕ್ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ವಾಗ್ದಾಳಿ ನಡೆಸಿದರು.

ಬಿಜೆಪಿ ಸದಸ್ಯರ ನಡೆಗೆ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿ, ನೋಟಿಸ್ ಕೊಟ್ಟು ಮಾತನಾಡಲಿ, ಪ್ರಶ್ನೋತ್ತರ ‌ಅವಧಿಯಲ್ಲಿ ಈ‌ ರೀತಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಗದ್ದಲ ಹಿನ್ನೆಲೆಯಲ್ಲಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದ ಸ್ಪೀಕರ್ ಯು. ಟಿ ಖಾದರ್ ಅವರು, ಅವರ ಕೊಠಡಿಯಲ್ಲಿ ಸಂಧಾನ ಸಭೆ ಕರೆದರು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಸಚಿವ ಎಚ್. ಕೆ ಪಾಟೀಲ್, ಮಾಜಿ ಸಚಿವರಾದ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಮತ್ತಿತರರು ಭಾಗವಹಿಸಿದ್ದರು.

ಈ ಬಗ್ಗೆ ಸ್ಪೀಕರ್ ಕರೆದಿದ್ದ ಸಂಧಾನಸಭೆ ವಿಫಲವಾಯಿತು. ಮತ್ತೆ ಸದನ ಸೇರಿದಾಗ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಸದನದಲ್ಲಿ ಬಿಜೆಪಿ ಸದಸ್ಯರಿಂದ ಜಮೀರ್ ವಿರುದ್ಧ ವಾಗ್ದಾಳಿ ಮುಂದುವರೆದಿದ್ದು, ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಆರ್. ಅಶೋಕ್ ಒತ್ತಾಯಿಸಿದರು.

ಇದು ಭಾರತ ಒಂದು ಧರ್ಮದ ಪರವಾಗಿ ಜಮೀರ್ ಮಾತನಾಡಬಾರದು. ನಮ್ಮನ್ನು ಕೀಳರಿಮೆಯಿಂದ ನೋಡಲು ಅವರಿಗೆ ಅವಕಾಶ ಯಾರು ಕೊಟ್ಟರು. ಜಮೀರ್ ವಜಾ ಮಾಡಬೇಕು ಎಂದು ಆರ್.‌ ಅಶೋಕ್ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!