ಕೆನಡಾವನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಳ- ಕಾರಣವೇನು ಗೊತ್ತೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದ ಜತೆ ಭಾರತವು ಇತ್ತೀಚಿನ ದಿನಗಳಲ್ಲಿ ರಾಜತಾಂತ್ರಿಕ ಸಂಘರ್ಷವನ್ನು ಕಾಣುತ್ತಿರುವುದು ಎಲ್ಲರ ಗಮನದಲ್ಲಿರುವ ಸಂಗತಿ. ಭಾರತೀಯರು, ಅದರಲ್ಲೂ ಪಂಜಾಬಿನವರು ದೊಡ್ಡ ಸಂಖ್ಯೆಯಲ್ಲಿ ಕೆನಡಾಕ್ಕೆ ಹೋಗಿ ನೆಲೆಸಿರುವುದಕ್ಕೆ ಬ್ರಿಟಿಷ್ ಆಡಳಿತ ಕಾಲದ ವಸಾಹತುಶಾಹಿ ಪರಿಸ್ಥಿತಿಗಳ ಕಾರಣವಿದೆ. ಹಾಗೆ ಅಲ್ಲಿ ಬೀಡುಬಿಟ್ಟವರನ್ನು ಕಾಲಾಂತರದಲ್ಲಿ ಮತ್ತೆ ಹೆಚ್ಚಿನವರು ಇಲ್ಲಿಂದ ಹೋಗಿ ಸೇರಿಕೊಂಡಿರುವುದು ಕೆನಡಾದ ಕೆಲವು ಪ್ರಾಂತ್ಯಗಳು ಮಿನಿ ಪಂಜಾಬ್ ಎಂದು ಕರೆಸಿಕೊಳ್ಳುವಷ್ಟರಮಟ್ಟಿಗೆ ಬೆಳೆಯಲು ಕಾರಣವಾಯ್ತು.
ಆದರೆ, ಈ ಟ್ರೆಂಡ್ ಭವಿಷ್ಯದಲ್ಲಿ ಕುಂಠಿತವಾಗಲಿದೆಯೇ? ಹಾಗೊಂದು ಸಾಧ್ಯತೆ ಸೂಚಿಸುತ್ತಿವೆ ಜಾಗತಿಕ ಮಾಧ್ಯಮ ಸಂಸ್ಥೆಗಳ ಕೆಲವು ವರದಿಗಳು.

ಇದಕ್ಕೆ ಕಾರಣ ಅಲ್ಲಿನ ಜಸ್ಟಿನ್ ಟ್ರೂಡೊ ಸರ್ಕಾರವು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದು. ಇದರ ಪರಿಣಾಮವಾಗಿ ಅಲ್ಲಿನ ಮನೆಬಾಡಿಗೆಯ ಪ್ರಮಾಣ ಗಣನೀಯವಾಗಿ ಏರಿದೆ. ಕೆನಡಾವನ್ನು ತಮ್ಮ ಮನೆಯನ್ನಾಗಿಸಿಕೊಂಡಿದ್ದ ವಲಸಿಗರ ದೊಡ್ಡ ವರ್ಗವೊಂದು ಈಗ ಇಂಥ ದುಬಾರಿ ಜೀವನದ ಪರಿಣಾಮವಾಗಿ ಆ ನೆಲವನ್ನು ತೊರೆಯುವ ನಿರ್ಧಾರ ತೆಗೆದುಕೊಳ್ಳುತ್ತಿದೆ. 2023ರ ಮೊದಲ ಆರು ತಿಂಗಳಲ್ಲೇ ಕೆನಡಾ ತೊರೆದವರ ಸಂಖ್ಯೆ 42,000 ಎಂದು ಹಿಂದುಸ್ತಾನ್ ಪತ್ರಿಕೆಯ ಜಾಲತಾಣ ವರದಿ ಮಾಡಿದೆ. 2022ರಲ್ಲಿ 93,818 ಮಂದಿ ಹಾಗೂ 2021ರಲ್ಲಿ 85,927 ಮಂದಿ ಕೆನಡಾ ತೊರೆದಿದ್ದಾರೆ.

ಕೆನಡಾದ ಆರ್ಥಿಕ ಸ್ಥಿತಿ ಬೇರೆ ಬೇರೆ ಆಯಾಮಗಳಲ್ಲಿ ಹದಗೆಟ್ಟಿದೆಯಾದರೂ ಕೆನಡಾ ತೊರೆಯುವುದಕ್ಕೆ ವಲಸಿಗರು ನೀಡುತ್ತಿರುವ ಪ್ರಮುಖ ಕಾರಣ ಎಂದರೆ ತಮ್ಮ ಸಂಬಳದ ಶೇ.30ರಷ್ಟನ್ನು ಮನೆ ಬಾಡಿಗೆಗಾಗಿಯೇ ವ್ಯಯಿಸಬೇಕಾಗುತ್ತಿದೆ ಎನ್ನುವುದು. ಇದರ ಜತೆ ಉಳಿದ ಮನೆಖರ್ಚುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡಾಗ ದುಡಿದಿದ್ದರಲ್ಲಿ ಏನೂ ಉಳಿಸಲಾಗದ ಪರಿಸ್ಥಿತಿ ಉದ್ಭವವಾಗುತ್ತಿದೆ ಎಂಬುದು ರಾಯಿಟರ್ಸ್ ಸುದ್ದಿಸಂಸ್ಥೆ ಜತೆ ಮಾತನಾಡಿರುವ ಹಲವರ ಅಳಲು.

ಕಾನ್ಫರೆನ್ಸ್ ಬೋರ್ಡ್ ಆಫ್ ಕೆನಡ ಎಂಬ ಸಂಸ್ಥೆಯೊಂದು ಸೆಪ್ಟೆಂಬರ್ 2023ರಲ್ಲಿ ಅಧ್ಯಯನ ವರದಿಯೊಂದನ್ನು ಪ್ರಕಟಿಸಿದೆ. ಆ ಪ್ರಕಾರ, 2017 ಮತ್ತು 2019ರ ನಡುವೆ ಕೆನಡಾದಿಂದ ಮತ್ತೆ ಮುಂದಿನ ವಲಸೆಗೆ ಹೋಗುತ್ತಿರುವವರ ಪ್ರಮಾಣವು ಆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 31ರಷ್ಟು ಹೆಚ್ಚಾಗಿತ್ತು.
ಕೆನಡಾಕ್ಕೆ ವಲಸೆ ಬಂದವರಿಗೆ ಅವರ ಪ್ರಾರಂಭಿಕ ವರ್ಷಗಳಲ್ಲಿ ಆಪ್ತತೆಯ ವಾತಾವರಣ ರೂಪುಗೊಳ್ಳದಿದ್ದರೆ ಅವರು ಶಾಶ್ವತವಾಗಿ ನೆಲೆ ನಿಲ್ಲುವುದಿಲ್ಲ. ಕೆನಡಾದ ಆರ್ಥಿಕ ಸ್ಥಿತಿ ಸರಾಗವಾಗಿರಬೇಕಾದರೆ ಹೊಸ ವಲಸೆಗಳನ್ನು ಸ್ವಾಗತಿಸುವುದರ ಜತೆಗೆ ಅದಾಗಲೇ ಬಂದಿರುವ ವಲಸಿಗರು ಮತ್ತೆಲ್ಲೂ ಹೋಗದೆ ನೆಲೆಯೂರುವ ವಾತಾವರಣವೂ ಇರಬೇಕಾಗುತ್ತದೆ ಎಂಬುದನ್ನು ವರದಿ ಒತ್ತಿ ಹೇಳಿದೆ.

ವಲಸಿಗರಿಗೆ ಆಶ್ರಯ ಸಮುಚ್ಛಯಗಳನ್ನು ನಿರ್ಮಿಸುವುದರ ಜತೆಯಲ್ಲೇ ಕೆನಡಾದ ಒಟ್ಟಾರೆ ಮೂಲಸೌಕರ್ಯವು ಉನ್ನತಿಗೇರಬೇಕಿದೆ. ಈ ನಿಟ್ಟಿನಲ್ಲಿ ನೀತಿ-ನಿರ್ಣಯಗಳು ಪೂರಕವಾಗಿರದಿದ್ದರೆ ವಲಸಿಗರನ್ನು ಉಳಿಸಿಕೊಂಡು ಕೆನಡಾದ ಆರ್ಥಿಕತೆ ಹಸಿರಾಗಿಡುವ ಸಾಧ್ಯತೆ ಕ್ಷೀಣವಾಗಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!