ಹೊಸದಿಗಂತ ವರದಿ, ಶಿವಮೊಗ್ಗ:
ಆರೋಗ್ಯ ತಪಾಸಣೆಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ. ಇದನ್ನು ನೋಡಿದರೆ ಅವರು ಕೇಡಿ ಶಿವಕುಮಾರ್ ಎಂಬ ಭಾವನೆ ಮೂಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ಕಾಳಜಿಯಿಂದ ಆರೋಗ್ಯ ಸಿಬ್ಬಂದಿ ತಪಾಸಣೆ ಮಾಡಲು ಹೋಗಿದ್ದಾರೆ. ಆದರೆ ಡಿಕೆಶಿ ಅವರ ಮೇಲೆಯೇ ದರ್ಪ ತೋರಿಸಿದ್ದಾರೆ. ಡಿಕೆಶಿ ಈ ಹಿಂದೆ ಗೂಂಡಾ ವರ್ತನೆ ತೋರುತ್ತಿದ್ದರು ಎಂಬುದನ್ನು ಕೇಳಿದ್ದೆ. ಈಗ ರಾಜ್ಯದ ಜನರೇ ಸ್ವತಃ ನೋಡಿದಂತಾಗಿದೆ ಎಂದರು.
ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂದು ಮೊದಲಿನಿಂದಲೇ ಹೇಳುತ್ತಲೇ ಬಂದಿದ್ದೇವೆ. ಅದನ್ನು ಕಡೆಗಣಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಯಾತ್ರೆಯಲ್ಲಿ ಯಾವ ಕೋವಿಡ್ ನಿಯಮಾವಳಿಗಳನ್ನೂ ಪಾಲಿಸಿಲ್ಲ. ಎಲ್ಲವನ್ನೂ ಕಡೆಗಣಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು.