Wednesday, October 5, 2022

Latest Posts

ಕಾವೇರಿ ನದಿ ಪ್ರವಾಹ ಪೀಡಿತ ಬಡಾವಣೆಗಳಿಗೆ ಸಚಿವ ನಾಗೇಶ್ ಭೇಟಿ

ಹೊಸದಿಗಂತ ವರದಿ ಕುಶಾಲನಗರ:
ಕುಶಾಲನಗರದ ಪ್ರವಾಹ ಪೀಡಿತ ಸಾಯಿ‌ ಮತ್ತು ಕುವೆಂಪು‌ ಬಡಾವಣೆಗೆ ಶಿಕ್ಷಣ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಸೋಮವಾರ ಅಪರಾಹ್ನ ಭೇಟಿ‌ ನೀಡಿ ಪರಿಶೀಲಿಸಿದರು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರೊಂದಿಗೆ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದರು. ಈ ಸಂದರ್ಭ ಹಾರಂಗಿ‌ ಜಲಾಶಯದಿಂದ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಕುವೆಂಪು ಬಡಾವಣೆಯ ಪ್ರವಾಹ ಸಂತ್ರಸ್ತರು ಆರೋಪಿಸಿದರಲ್ಲದೆ, ಪ್ರವಾಹ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಸಚಿವರನ್ನು ಆಗ್ರಹಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಜೆಪಿ ಸರಕಾರ ಕೊಡಗನ್ನು ಯಾವತ್ತೂ ಕಡೆಗಣಿಸಿಲ್ಲ.‌ ಪ್ರಕೃತಿ ವಿಕೋಪ ಪರಿಹಾರಕ್ಕೆ ಅನುದಾನ ಒದಗಿಸಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ.‌ಈಗಾಗಲೇ ಜಿಲ್ಲೆಯಲ್ಲಿ 35 ಕೋಟಿ ಅನುದಾನ ಲಭ್ಯವಿದೆ. ಹಾನಿಗೊಳಗಾದ ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತಿದೆ‌. ಬೆಳೆಹಾನಿ ಸೇರಿದಂತೆ ಮಳೆಹಾನಿ ಪರಿಹಾರಕ್ಕೆ ಅಗತ್ಯವಿರುವ ಅನುದಾನ ತರುವಲ್ಲಿ ಜಿಲ್ಲೆಯ ಶಾಸಕದ್ವಯರು ಈಗಾಗಲೇ ಕ್ರಮಕೈಗೊಂಡಿದ್ದು ಮುಖ್ಯಮಂತ್ರಿಗಳು ಕೂಡಾ ಅಗತ್ಯ ಬೇಡಿಕೆ ಈಡೇರಿಸುವ ಭರವಸೆ‌ ನೀಡಿದ್ದಾರೆ ಎಂದು ತಿಳಿಸಿದರು.

ಕುಶಾಲನಗರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಈಗಾಗಲೆ ಅಗತ್ಯ ಕ್ರಮಕ್ಕೆ‌ ಮುಂದಾಗಲಾಗಿದೆ. ನದಿಯಲ್ಲಿ ಹೂಳು ತುಂಬಿದ ಕಾರಣ ನದಿ ವಿಸ್ತೀರ್ಣ ಕುಗ್ಗಿದೆ. ಹೂಳೆತ್ತುವ ಚಿಂತನೆ ನಡೆಸಿದ್ದು, ಮಳೆ ಆರಂಭವಾದ ಕಾರಣ ಕಾಮಗಾರಿ‌ ಕೈಗೊಂಡಿಲ್ಲ. ನೀರಾವರಿ ನಿಗಮದ ಮೂಲಕ ಶಾಸಕ ಅಪ್ಪಚ್ಚುರಂಜನ್ ಅವರು ರೂ 5 ಕೋಟಿ ವೆಚ್ಚದಲ್ಲಿ ಪ್ರವಾಹ ತಡೆಗೋಡೆ ನಿರ್ಮಾಣ ಹಾಗೂ ಬಡಾವಣೆಗಳ ಚರಂಡಿ ಉನ್ನತೀಕರಣಕ್ಕೆ ಈಗಾಗಲೇ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು. ಪ್ರವಾಹ ನಿಯಂತ್ರಣ ಸಂಬಂಧ ನಮ್ಮಲ್ಲಿರುವ ‘ದಿ ಬೆಸ್ಟ್ ಇಂಜಿನಿಯರ್ಸ್’ಗಳನ್ನು ಒಮ್ಮೆ ಸ್ಥಳಕ್ಕೆ ಕರೆದುಕೊಂಡು ಬಂದು ಚರ್ಚಿಸಲಾಗುವುದು ಎಂದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್, ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷ ಚೆಲುವರಾಜು, ಪಪಂ‌ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯರಾದ ಅಮೃತ್ ರಾಜ್, ತಿಮ್ಮಪ್ಪ, ಗ್ರಾಪಂ ಪಿಡಿಒ ಸುಮೇಶ್, ಎಸ್ ಪಿ. ಅಯ್ಯಪ್ಪ, ಕುಡಾ ಸದಸ್ಯ ವೈಶಾಖ್, ನೀರಾವರಿ‌ ನಿಗಮದ ಎಇಇ ಪುಟ್ಟಸ್ವಾಮಿ, ಅಭಿಯಂತರರಾದ ಸಿದ್ದರಾಜು ಶೆಟ್ಟಿ, ಕಿರಣ್, ಗ್ರಾಪಂ‌ ಸದಸ್ಯರು, ಪ್ರವಾಹ ಸಂತ್ರಸ್ತರ ಸಮಿತಿ ಪ್ರಮುಖರು, ಬಡಾವಣೆ ನಿವಾಸಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!