ಕೊಡಗಿನ ರೈತರ ಸಮಸ್ಯೆ ಪರಿಹಾರಕ್ಕೆ‌ ಕಂದಾಯ ಸಚಿವರೊಂದಿಗೆ ಚರ್ಚೆ: ಸಚಿವ ಸೋಮಶೇಖರ್

ದಿಗಂತ ವರದಿ ಮಡಿಕೇರಿ:

ಕೊಡಗಿನಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕಂದಾಯ. ಸಚಿವರಲ್ಲಿ ಚರ್ಚಿಸಿ ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ಸಹಕಾರ ಸಚಿವ ಸೋಮಶೇಖರ್ ಭರವಸೆ ನೀಡಿದ್ದಾರೆ.
ಪಾಲಿಬೆಟ್ಟದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ನೀಡಿದ ಮನವಿಯನ್ನು ಪರಿಶೀಲಿಸಿ, ಈ ಬಗ್ಗೆ ಕಂದಾಯ ಸಚಿವರೊಂದಿಗೆ ಚರ್ಚಿಸುವ ಭರವಸೆಯಿತ್ತರು.

ಕೊಡಗಿನಲ್ಲಿ ಸಹಕಾರ ಕ್ಷೇತ್ರ ಸುಭದ್ರವಾಗಿದ್ದು, ಒಂದೆರಡು ಸಂಘಗಳು ಹೊರತುಪಡಿಸಿದರೆ ಯಾವುದೇ ಸಂಘದಲ್ಲಿಯೂ ಅವ್ಯವಹಾರದ ದೂರುಗಳಿಲ್ಲ. ಕೊಡಗಿನಲ್ಲಿ ಸಹಕಾರ ಸಂಘಗಳು ಜನರ ವಿಶ್ವಾಸ ಗಳಿಸಿ ರಾಜ್ಯಕ್ಕೇ ಮಾದರಿಯಾಗಿವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘಿಸಿದರು.

ಕೊಡಗಿನ ಸಹಕಾರ ಸಂಘಗಳು ಹೆಸರಿಗೆ ತಕ್ಕಂತೆ ಸಹಕಾರ ಸಂಘಗಳಾಗಿದ್ದು, ಎಲ್ಲಿಯೂ ಅಸಹಕಾರ ಸಂಘಗಳಾಗಿ ಕುಖ್ಯಾತಿ ಪಡೆದಿಲ್ಲ. ಸ್ಥಳೀಯ ಜನತೆಯ ಸಹಕಾರದಿಂದ ಪ್ರತಿಯೊಂದು ಸಹಕಾರ ಸಂಘಗಳೂ ಲಾಭದಲ್ಲಿವರ ಯಾವುದೇ ಸಂಘದ ಆರ್ಥಿಕ ಆರೋಗ್ಯದ ಬಗ್ಗೆ ತಿಳಿಯಲು ಆ ಸಂಘದ 10 ವರ್ಷಗಳ ಇತಿಹಾಸ ಗಮನಿಸಿ ಎಷ್ಟು ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ನೋಡಬೇಕು ಎಂದರು.
ಪ್ರಸ್ತುತ ರಾಜ್ಯದಲ್ಲಿನ 5,400 ಸಹಕಾರ ಸಂಘಗಳ ಪೈಕಿ 3 ಸಾವಿರದಷ್ಟು ಸಂಘಗಳಿಗೆ ಸ್ವಂತ ಕಟ್ಟಡ ಇದೆ. ಕೊಡಗಿನಲ್ಲಿ ಬಹುತೇಕ ಸಂಘಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಂದೆರಡು ಸಂಘಗಳಲ್ಲಿ ನಡೆದಿರುವ ಅಪಾರ ಪ್ರಮಾಣದ ಆರ್ಥಿಕ ಲೂಟಿಯಿಂದಾಗಿ ಸಹಕಾರ ಸಂಸ್ಥೆಗಳ ಬಗ್ಗೆ ಜನತೆಯಲ್ಲಿ ನಂಬಿಕೆ, ವಿಶ್ವಾಸ ಕಡಮೆ ಆಗುವಂತಾಗಿದೆ. ಇಂತಹ ಪರಿಸ್ಥಿತಿ ಬರಬಾರದು ಎಂದು ಅಭಿಪ್ರಾಯಪಟ್ಟ ಸಚಿವರು, ಸಹಕಾರ ಸಂಘಗಳು ಗ್ರಾಹಕ ಸದಸ್ಯರ ನಂಬಿಕೆಗೆ ಬದ್ದವಾಗಿ ಕಾರ್ಯನಿರ್ವಹಿಸಬೇಕೆಂದು‌ ಕಿವಿಮಾತು ಹೇಳಿದರು.

100 ವರ್ಷ ಪೂರೈಸಿರುವ ಪಾಲಿಬೆಟ್ಟದ ಕೃಷಿ ಪತ್ತಿನ ಸಹಕಾರ ಸಂಘವು ಈ ಮೂಲಕ ಸುದೀರ್ಘ ಮತ್ತು ವಿಶ್ವಾಸಾರ್ಹ ಆಡಳಿತದ ಇತಿಹಾಸಕ್ಕೆ ಕಾರಣವಾಗಿದೆ. ಉತ್ತಮ ಕಾರ್ಯಚಟುವಟಿಕೆ ಮೂಲಕ ಈ ಸಂಘ ಶ್ಲಾಘನೆಗೆ ಅರ್ಹವಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಶತಮಾನೋತ್ಸವ ಭವನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರ ರಂಗದ ಕಲ್ಪನೆಯೇ ಅಪೂರ್ವವಾದುದು..ಆರ್ಥಿಕವಾಗಿ ಸಂಕಷ್ಟದಲ್ಲಿರುವವರ ಸಮಸ್ಯೆಯನ್ನು ಪ್ರೀತಿ, ವಿಶ್ವಾಸದಿಂದ ಪರಿಹರಿಸಿ ಜೀವನದಲ್ಲಿ ಏಳಿಗೆಯಾಗಲು ಸಹಕಾರ ಸಂಘದ ವ್ಯವಸ್ಥೆ ಕಾರಣವಾಗಿದೆ ಎಂದು ಶ್ಲಾಘಿಸಿದರಲ್ಲದೆ, ವಾಣಿಜ್ಯ ಬ್ಯಾಂಕ್‍ಗಳ ಸಿಬ್ಬಂದಿಗಳಿಗೆ ನಮ್ಮ ಭಾಷೆಯೇ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ಜನರ ದುಗುಡ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತನಗೆ ಮಂಗಳೂರು ಕ್ಷೇತ್ರದ ಮತದಾರರು ನಯಾ ಪೈಸೆ ಖರ್ಚಿಲ್ಲದೆ ವಿಧಾನಪರಿಷತ್’ಗೆ ಸದಸ್ಯನಾಗಿ ಆಯ್ಕೆ ಮಾಡಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಿಸಿಕೊಂಡರು.
ಗಾಳಿಗೂ ಹಣ ನೀಡಬೇಕಾಗಬಹುದು:ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಅನೇಕರ ಪಾಲಿಗೆ ಆರ್ಥಿಕವಾಗಿ ಸಹಕಾರ ನೀಡುವಲ್ಲಿ ನಾಡಿನ ಸಹಕಾರಿ ವ್ಯವಸ್ಥೆ ಕಾರಣವಾಗಿದೆ.ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮಘಟ್ಟ ಶ್ರೇಣಿಯಿದ್ದು ಪರಿಸರ ಮಾಲಿನ್ಯ ತಡೆಗಟ್ಟಿ ಪರಿಸರ ರಕ್ಷಿಸಿ ಎಂಬ ಜಾಗೃತಿಯನ್ನು ನಾಡಿನ ಎಲ್ಲಾ ಕಡೆ ಮೂಡಿಸಲಾಗುತ್ತಿದೆ. ನೀರಿಗೆ ದುಡ್ಡು ಕೊಟ್ಟು ಕೊಳ್ಳಬೇಕಾದ ಕಾಲ ಇಂದಿನದ್ದಾದರೆ ಭವಿಷ್ಯದಲ್ಲಿ ಗಾಳಿಗೂ ಹಣ ಕೊಟ್ಟು ಉಸಿರಾಡಬೇಕಾದ ದುಸ್ಥಿತಿ ತಲೆದೋರಬಹುದು. ಹೀಗಾಗಿ ಮಾಲಿನ್ಯ ರಹಿತ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಸ್ವಂತ ಕಟ್ಟಡಗಳಿಲ್ಲದ ಗ್ರಾಮೀಣ ಪ್ರದೇಶದ ಅನೇಕ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸಹಕಾರ ಇಲಾಖೆಯಿಂದ ಸೂಕ್ತ ಅನುದಾನ ನೀಡುವಂತೆ ಕೋರಿದರು.

ಕೊಡಗಿನ ರೈತರು ಬೆಳೆದ ಭತ್ತದ ಖರೀದಿಗೆ ಖರೀದಿ ಕೇಂದ್ರಗಳಲ್ಲಿ ಆರ್‍ಟಿಸಿ ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ತೀವ್ರ ಸಮಸ್ಯೆಯಾಗಿದೆ ಎಂದರಲ್ಲದೆ, ಕೊಡಗಿನವರಿಗೆ ಎರಡು ಕೋವಿಗಳಿದ್ದಲ್ಲಿ ಅಂತಹವುಗಳ ಪೈಕಿ ಕೇವಲ ಒಂದು ಕೋವಿಗೆ ಮಾತ್ರ ಜಿಲ್ಲಾಡಳಿತ ಪರವಾನಗಿ ನೀಡುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕೆಂದು‌ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕಡುಬಡವರಿಗೆ ಆರ್ಥಿಕ ಚೈತನ್ಯವನ್ನು ನಾಡಿನ ಸಹಕಾರ ಸಂಘಗಳು ನೀಡುತ್ತಾ ಬಂದಿವೆ. ಕೊಡಗಿನಲ್ಲಿ ಸಹಕಾರ ಸಂಘಗಳು ಭದ್ರ ಬುನಾದಿ ಹೊಂದಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಜಿತ್ ಕರುಂಬಯ್ಯ ಸಂಪಾದಕೀಯದಲ್ಲಿ ಮೂಡಿಬಂದ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ ‘ಶತಸಂಭ್ರಮ’ವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ ಬಿಡುಗಡೆ ಮಾಡಿದರು.
ಜಮ್ಮಾ ದಾಖಲಾತಿ ಸಮಸ್ಯೆಯಿಂದಾಗಿ ಕೊಡಗಿನ ಬಹುತೇಕ ರೈತರು ಸರ್ಕಾರದ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಹಕಾರ ಮತ್ತು ಉಸ್ತುವಾರಿ ಸಚಿವರು ದಾಖಲಾತಿ ಸಮಸ್ಯೆಯನ್ನು ಕಂದಾಯ ಸಚಿವರ ಗಮನಕ್ಕೆ ತಂದು ಬಗೆಹರಿಸಬೇಕೆಂದು ಅವರು ಮನವಿ ಮಾಡಿದರು.

ಜಿಲ್ಲೆಯ 1.50 ಲಕ್ಷ ರೈತರು ಸಾಲ ಸೌಲಭ್ಯಕ್ಕೆ ಅರ್ಹರಾಗಿದ್ದರೂ ದಾಖಲಾತಿ ಸಮಸ್ಯೆಯಿಂದಾಗಿ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಕೋಡಂದೇರ ಗಣಪತಿ ಸಚಿವರ ಗಮನ ಸೆಳೆದರು. ಕೇಂದ್ರ ಸರ್ಕಾರ ಏನಾದರೂ ಹೊಸ ಸಹಕಾರ ನೀತಿ ಜಾರಿಗೆ ತಂದದ್ದೇ ಆದಲ್ಲಿ ಸಹಕಾರ ಸಂಘದಲ್ಲಿ ಡಿಪಾಸಿಟ್ ಸಂಗ್ರಹಕ್ಕೆ ಅವಕಾಶ ಇಲ್ಲದಾಗುತ್ತದೆ. ಹೀಗಾಗಿ ಇಂತಹ ಅಪಾಯಕಾರಿ ನೀತಿಯನ್ನು ಜಾರಿಗೊಳಿಸಬಾರದು ಎಂದೂ ಬಾಂಡ್ ಗಣಪತಿ ಆಗ್ರಹಿಸಿದರು.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಿನಿಕಂಡ ಎಸ್. ಶ್ಯಾಂಚಂದ್ರ ಅವರು ಸಂಘದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ: ಶತಮಾನೋತ್ಸವ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಮುರುವಂಡ ಎಂ.ಪೊನ್ನಪ್ಪ, ಕುಟ್ಟಂಡ ವಿ. ಕುಟ್ಟಪ್ಪ, ಮಾಳೇಟಿರ ಎಂ.ಕಾಳಪ್ಪ, ಕಾಡ್ಯಮಾಡ ಟಿ.ಕಾರ್ಯಪ್ಪ, ಮೂಕೊಂಡ ವಿಜು ಸುಬ್ರಮಣಿ ಮತ್ತು ಹಾಲಿ ಅಧ್ಯಕ್ಷ ಶ್ಯಾಂಚಂದ್ರ, ಉಪಾಧ್ಯಕ್ಷ ಕೊಲ್ಲೀರ ಜಿ.ಧರ್ಮಜ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಟ್ಟಂಡ ಶಶಿಕಲಾ ಅವರನ್ನು ಸನ್ಮಾನಿಸಲಾಯಿತು.
ಶ್ಯಾಂಚಂದ್ರ ಸ್ವಾಗತಿಸಿ, ಕೊಲ್ಲೀರ ಜಿ.ಧರ್ಮಜ ವಂದಿಸಿದರು. ಮಾದೇಟಿರ ಬೆಳ್ಯಪ್ಪ, ಚೋಕಿರ ಅನಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜೆ.ಕೆ.ಸುಭಾಷಿಣಿ, ಅನಿತಾ ಸುರೇಶ್, ಎಂ.ಎ.ಕವಿತಾ ಪ್ರಾರ್ಥಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!