ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿರುವ ಮಿರಾಜ್ ಪಬ್ ತಡರಾತ್ರಿಯವರೆಗೂ ಕಾರ್ಯ ನಿರ್ವಹಿಸಿದ್ದು, ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಜೆಡಿಎಸ್ ಕಿಡಿಕಾರಿದೆ.
ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ರಾತ್ರಿ ಒಂದು ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ.. ಆದರೆ ಮುಂದಿನ ಮುಖ್ಯಮಂತ್ರಿ ಎಂದು ಹಗಲುಗನಸು ಕಾಣುತ್ತಿರುವ ಸಚಿವರೊಬ್ಬರ ಒಡೆತನದ ಮಿರಾಜ್ ಪಬ್ ನಿಯಮ ಮೀರಿ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ‘ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಂಧಾ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೇಳುವವರು, ಇಲ್ಲ ಕೇಳುವವರು ಯಾರು ಇಲ್ಲ. ಮಿರಾಜ್ ಪಬ್ ರಾತ್ರಿ ಒಂದು ಗಂಟೆಯಾದರೂ ಬಂದ್ ಮಾಡದೇ ಡಿ.ಜೆ ಸೌಂಡ್ ಹಾಕಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ.
ಈ ಬಗ್ಗೆ ಸ್ಥಳೀಯರು ಸೆ.9 ರಂದು ಮತ್ತು ಸೆ. 16 ರಂದು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರೂ ಪಬ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಪೊಲೀಸರೇ ಆ ಪ್ರಭಾವಿ ಸಚಿವರ ಒತ್ತಡಕ್ಕೆ ಒಳಗಾಗಿ ಕಂಡು ಕಾಣದಂತೆ ಸುಮ್ಮನಿದ್ದೀರಾ..? ಕಾನೂನು, ಕಟ್ಟಳೆ, ನಿಯಮಗಳು ಕೇವಲ ಜನಸಮಾನ್ಯರಿಗಷ್ಟೇ ಸೀಮಿತವೇ..? ಕಾಂಗ್ರೆಸ್ ನಾಯಕರಿಗೆ ಅದು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದೆ.