Monday, August 8, 2022

Latest Posts

ವಿವಾದದಲ್ಲಿ ಸಿಲುಕಿಕೊಂಡ ವಿಶ್ವ ಸುಂದರಿ: ಹರ್ನಾಜ್ ಕೌರ್ ವಿರುದ್ಧ ಕೋರ್ಟ್ ನಲ್ಲಿ ದಾವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವ ಸುಂದರಿ ಹರ್ನಾಜ್ ಕೌರ್ ಸಂಧು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಚೊಚ್ಚಲ ಪಂಜಾಬಿ ಸಿನೆಮಾದ ಪ್ರಚಾರಕ್ಕೆ ಸಹಕರಿಸದ ಇವರ ವಿರುದ್ಧ ಪಂಜಾಬ್ ನಟಿ ಉಪಾಸನಾ ಸಿಂಗ್ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಇದೇ ವೇಳೆ ಗಂಭೀರ ಆರೋಪ ಮಾಡಿರುವ ಉಪಾಸನಾ ಸಿಂಗ್, ತಮ್ಮ ವಕೀಲರಾದ ಕರಣ್ ಸಚ್‌ದೇವ ಮತ್ತು ಇರ್ವಿನೀತ್ ಕೌರ್ ಮೂಲಕ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮುಖೇನ ಹರ್ನಾಜ್ ಕೌರ್ ತಮ್ಮ ಮೊದಲ ಚಿತ್ರದಲ್ಲೇ ಕಾನೂನು ಸಮರ ಎದುರಿಸಬೇಕಾದ ಪ್ರಸಂಗ ಎದುರಾಗಿದೆ.

ಆಗಸ್ಟ್ 19 ರಂದು ಬಿಡುಗಡೆಯಾಗಲಿರುವ ಪಂಜಾಬಿ ಚಿತ್ರ ‘ಬೈ ಜಿ ಕುಟ್ಟಾಂಗೇ’ (ಚಿತ್ರದಲ್ಲಿ ಹರ್ನಾಜ್ ಕೌರ್ ಸಂಧು ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದ ಒಪ್ಪಂದದಂತೆ ಪ್ರಚಾರದಲ್ಲಿ ಅವರು ತೊಡಗಬೇಕಿತ್ತು. ಆದರೆ ಅವರು ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂದು ಉಪಾಸನಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಚಿತ್ರೀಕರಣಕ್ಕೂ ಮುನ್ನ (2020) ಹರ್ನಾಜ್ ಕೌರ್ ಸಂಧು ಅವರು ‘ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಕಂಪನಿಯ ಕಾನೂನು ಪ್ರಕಾರ ನಡೆದುಕೊಳ್ಳುವುದಾಗಿ ಒಪ್ಪಿಗೆ ಸೂಚಿಸಿದ್ದರು. ಅದರ ಪ್ರಕಾರ ಹರ್ನಾಜ್ ಚಿತ್ರದ ಪ್ರಚಾರ ಚಟುವಟಿಕೆಗಾಗಿ ಕೆಲವು ದಿನಗಳನ್ನು ನೀಡಬೇಕಾಗಿತ್ತು. ಆದರೆ, ಈ ನಿಯಮ ಮುರಿದಿದ್ದಾರೆ ಎನ್ನುವುದು ಸಿಂಗ್‌ ಆರೋಪಿಸಿದ್ದಾರೆ.

ಕೌರ್ ವಿಶ್ವ ಸುಂದರಿಯಾಗಿ ಇತ್ತೀಚೆಗಷ್ಟೇ ಹೊರಹೊಮ್ಮಿದ್ದಾರೆ. ಆದರೆ, ಅದಕ್ಕೂ ಮುನ್ನವೇ ನಮ್ಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ, ವಿಶ್ವ ಸುಂದರಿ ಕಿರೀಟ ಧರಿಸಿದ ಬಳಿಕ ಇದ್ದಕ್ಕಿದ್ದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಚಿತ್ರದ ಬಗೆಗಿನ ಜವಾಬ್ದಾರಿಗಳನ್ನೂ ಮರೆತಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕ ಮೊದಲು 27-05-2022 ಆಗಿತ್ತು. ಪ್ರಚಾರಕ್ಕಾಗಿ ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ದಿನಾಂಕವನ್ನು 19-08 2022 ಕ್ಕೆ ಬದಲಾಯಿಸಲಾಗಿದೆ. ಆದರೂ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಉಪಾಸನಾ ಸಿಂಗ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಬೈ ಜಿ ಕುಟ್ಟಾಂಗೇ’ ಚಿತ್ರವು ಇದೇ ಆಗಸ್ಟ್ 19 ರಂದು ಬಿಡುಗಡೆಯಾಗಲಿದ್ದು ದೇವ್ ಕರೌಡ್, ನಾನಕ್ ಸಿಂಗ್, ಹರ್ನಾಜ್ ಸಂಧು, ಉಪಾಸನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋಸ್ ನಿರ್ಮಿಸಿದೆ. ಸ್ಮೀಪ್ ಕಾಂಗ್ ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss