ನನಗೆ ಕಜಾಕಿಸ್ತಾನದಿಂದ ಮಧ್ಯರಾತ್ರಿ ಕರೆ ಬಂದಿದೆ: ಕೆ.ಎಸ್‌ ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ:

ನನಗೆ ನಿನ್ನೆ ರಾತ್ರಿ‌ 12:30ಕ್ಕೆ ಕಜಾಕಿಸ್ತಾನದ +7(678)815-46-5 ಸಂಖ್ಯೆಯಿಂದ ಮಿಸ್ಡ್​ ಕಾಲ್ ಬಂದಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ (ಭಾನುವಾರ) ರಾತ್ರಿ 12:30ಕ್ಕೆ ಖಜಾಕಿಸ್ತಾನದಿಂದ ಮಿಸ್ಡ್​ ಕಾಲ್ ಬಂದಿದೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ‌‌ ಮಾಡಲಿದ್ದೇನೆ ಎಂದರು.

ಮಹಾರಾಷ್ಟ್ರದ ಜಯೇಶ್ ಅಲಿಯಾಸ್ ಶಾಹೀರ್ ಶೇಕ್ ಎಂಬಾತ ‍ನನ್ನ ಕೊಲೆಗೆ ಯತ್ನ ನಡೆಸಿರುವ ಬಗ್ಗೆ ಎನ್​ಐಎಯಿಂದ ಇತ್ತೀಚೆಗೆ ಮಾಹಿತಿ ತಿಳಿದು ಬಂದಿತ್ತು. ಆತ ಪಿಎಫ್ಐ ಕಾರ್ಯಕರ್ತನೆಂದು ಸಹ ಎನ್​ಐಎ ತಿಳಿಸಿತ್ತು. ಆದರೆ, ನಿನ್ನೆ ರಾತ್ರಿ ಬಂದ ಮಿಸ್ಡ್​ ಕಾಲ್​ ಯಾರದ್ದೆಂದು ಗೊತ್ತಿಲ್ಲ. ಹಾಗಾಗಿ ದೂರು ನೀಡಲಿರುವೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಬಂದಿದ್ದ ಕರೆ!
ಇದೇ ಸಂದರ್ಭದಲ್ಲಿ ಅವರು ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಬಂದಿದ್ದ ಬಗ್ಗೆಯೂ ನೆನಪಿಸಿಕೊಂಡ ಅವರು, “ಹಿಂದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರನ್ನು ಅವರು ಬಂಧಿಸಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಎಂದು ಗೊತ್ತಾಗಿತ್ತು. ಆತ ಶಾಹೀರ್ ಶೇಖ್. ಆತನ ಡೈರಿಯಲ್ಲಿ ನನ್ನ ಹೆಸರೂ ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನನಗೆ ಕರೆ ಬಂದಿರಬಹುದು” ಎಂದು ಹೇಳಿದ್ದು ಇದೇ ಸಂದರ್ಭದಲ್ಲಿ ಯಾವ ಮೊಬೈಲ್​ ಸಂಖ್ಯೆಯಿಂದ ಕರೆ ಬಂದಿತ್ತು ಎನ್ನುವುದನ್ನೂ ತಿಳಿಸಿದ್ದಾರೆ.

ಇದಾದ ಮೇಲೆ ಕಾಂಗ್ರೆಸ್​ ಮೇಲೆ ಹರಿಹಾಯ್ದ ಈಶ್ವರಪ್ಪ, “:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಬೆಳಗಾವಿಯ ತಿಲಕ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೇ ಸ್ವತಃ ದೂರು ದಾಖಲಿಸಿದ್ದಾರೆ. ಶಿರಸಿಯಲ್ಲೂ ಹಸಿರು ಬಾವುಟ ಹಾರಾಡಿದೆ” ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!