ನೆಚ್ಚಿನ ಬಾಲ್ಯದ ಕ್ರೀಡೆ ಲಗೋರಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ?.. ಇಲ್ಲಿದೆ ಸದಾವಕಾಶ, ಬನ್ನಿ, ಆಡಿ ಸಂಭ್ರಮಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಾಲನ ನಿರಂತರ ಪರಿಚಲನೆಗೆ ಪಕ್ಕಾಗಿ ಹಾಗೂ ಆಧುನಿಕತೆಯ ಭರಾಟೆಗಳ ನಡುವೆ ಇಂದು ಅನೇಕ ನೆಲಮೂಲದ ದೇಶಿಯ ಕ್ರೀಡೆಗಳು ತೆರೆಮರೆಗೆ ಸರಿಯುತ್ತಿವೆ. ಅಂತಹ ಕ್ರೀಡೆಗಳಲ್ಲಿ ಲಗೋರಿ ಕ್ರೀಡೆಯೂ ಒಂದು. ಒಂದು ಕಾಲದಲ್ಲಿ ಮನೆಮನೆಗಳಲ್ಲಿ ಮಕ್ಕಳು, ದೊಡ್ಡವರೆನ್ನದೆ ಆಡಿ ಸಂಭ್ರಮಿಸುತ್ತಿದ್ದ ಲಗೋರಿ ಕ್ರೀಡೆ ನಿಧಾನಕ್ಕೆ ಅಂಗಣ, ಜನಮಾನಸದಿಂದಲೇ ಮರೆಯಾಗುತ್ತಿದೆ. ಈ ನಡುವೆ ದೇಸಿ ಕ್ರೀಡೆಗಳನ್ನು ಉತ್ತೇಜಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತು ʼಕ್ರೀಡಾ ಭಾರತಿʼ ಸಂಸ್ಥೆಯು ಬೆಂಗಳೂರು ನಗರದಲ್ಲಿ ಜೂ.19 ರಂದು ಲಗೋರಿ ಪಂದ್ಯಾವಳಿಯನ್ನು ಆಯೋಜಿಸಿದೆ.
ನದಿ ಕಣಿವೆಗಳಲ್ಲಿ ಮಾನವ ಸಂಸ್ಕೃತಿ ಅರಳಿದಾಗ ಕ್ರೀಡೆಗೂ ಪ್ರಾಧಾನ್ಯತೆ ದೊರೆಯಿತು. ಇಂದು ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಿ ಹೋಗಿದೆ. ಕ್ರೀಡೆ ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಔಷಧಿಯೂ ಕೂಡ. ಮಕ್ಕಳ ಜಾಣ್ಮೆ, ಚಾತುರ್ಯ, ಧೈರ್ಯಶಕ್ತಿ ಹಾಗೂ ಕುತೂಹಲ ದೃಷ್ಟಿಗೆ ಅನುಗುಣವಾಗಿ ವಿವಿಧ ಆಟಗಳು ಬೆಳಕಿಗೆ ಬಂದಿದೆ.
ಲಿಂಗೋಚ ಎಂದೂ ಕರೆಸಿಕೊಳ್ಳುವ ಲಗೋರಿ ಹೊರಾಂಗಣ ಕ್ರೀಡೆ. ಇದು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರಿ ಆಡುವ ಆಟ. ಇದಕ್ಕೆ ಬೇಕಾದ ಪರಿಕರಗಳೆಂದರೆ, ಚೆಂಡು, ಚಪ್ಪಟೆ ಕಲ್ಲುಗಳು ಇತ್ಯಾದಿ. ಈ ಆಟವನ್ನು ಸಮಯದ ಮಿತಿ ಇಲ್ಲದೆ ಆಡಬಹುದು. ನೀವು ನಿಮ್ಮ ಬಾಲ್ಯವನ್ನು ನಿಮ್ಮ ಬೀದಿಗಳಲ್ಲಿ ‘ಲಗೋರಿ’ ಆಡಿ ಸಂಭ್ರಮಮಿಸಿದ್ದರೆ, ಈಗ ಅದಕ್ಕಾಗಿ ಬಹುಮಾನವನ್ನು ಗೆಲ್ಲುವ ಅವಕಾಶವಿದೆ. ಕ್ರೀಡಾ ಭಾರತಿ ಸಂಸ್ಥೆಯು ಅದಕ್ಕೊಂದು ಅವಕಾಶ ಕಲ್ಪಿಸಿಕೊಟ್ಟಿದೆ.
ಇದೇ ಜೂ.19 ರಂದು ಕ್ರೀಡಾ ಭಾರತಿ (ಬೆಂಗಳೂರು ಮಹಾನಗರ) ಕ್ರೀಡಾ ಸಂಸ್ಥೆಯು ಪದ್ಮನಾಭನಗರದ ಎ.ಬಿ. ವಾಜಪೇಯಿ ರಂಗಮಂದಿರ (ಕಾರ್ಮೆಲ್ ಶಾಲೆಯ ಆಟದ ಮೈದಾನ)ದಲ್ಲಿ ಲಗೋರಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಮಾಡಿಕೊಂಡ ಆಸಕ್ತರಿಗೆ ದೇಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಸಂತಸ ಸಿಗಲಿದೆ.
ʼಈ ಹಿಂದೆ ರಾಜ್ಯದಲ್ಲಿ ಕಬಡ್ಡಿ, ಹಗ್ಗಜಗ್ಗಾಟ ಮತ್ತು ಇತರ ಕ್ರೀಡೆಗಳಿಗಾಗಿ ಪಂದ್ಯಾವಳಿಗಳನ್ನು ಆಯೋಜಿಸಿದ್ದೇವೆ. ಬೆಂಗಳೂರಿನಲ್ಲಿ ತಮ್ಮ ನೆರೆಹೊರೆಯಲ್ಲಿ ಲಗೋರಿ ಆಡದೆ ಬೆಳೆದವರು ಯಾರೂ ಇಲ್ಲ. ಈ ಪಂದ್ಯಾವಳಿ ಆಯೋಜನೆಯ ಉದ್ದೇಶ ಕೇವಲ ಸ್ಪರ್ಧೆ ಮತ್ತು ಬಹುಮಾನಗಳು ಮಾತ್ರವಲ್ಲ, ಕಲ್ಲುಗಳನ್ನು ಕಟ್ಟುವ ರೀತಿಯಲ್ಲಿ, ಒಟ್ಟಾಗಿ ಸಮಾಜವನ್ನು ಭದ್ರವಾಗಿ ಕಟ್ಟಬೇಕೆಂಬ ಸಂದೇಶ ಸಾರುವುದು ಆಶಯವಾಗಿದೆ ಎನ್ನುತ್ತಾರೆ ಕ್ರೀಡಾಭಾರತಿ ಸಂಸ್ಥೆಯ ಪ್ರಮುಖರು.
ಪುರುಷ ಮತ್ತು ಮಹಿಳೆಯರ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಆಟಗಳನ್ನು ಆಯೋಜಿಸಲಾಗಿದೆ. 18 ರಿಂದ 50 ವರ್ಷದೊಳಗಿನ
ನಗರದ ಎಲ್ಲಾ ಭಾಗಗಳ ಜನರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರು. ಪ್ರತಿ ತಂಡವು ಒಟ್ಟು ಹತ್ತು ಆಟಗಾರರನ್ನು
ಹೊಂದಿರಬೇಕು. ಒಟ್ಟು ತಂಡಗಳು ಮತ್ತು ಪಂದ್ಯಗಳ ಸಂಖ್ಯೆಯನ್ನು ಜೂನ್ 6 (ನೋಂದಣಿಗೆ ಕೊನೆಯ ದಿನ) ನಂತರ ನಿರ್ಧರಿಸಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!