October 12, 2026
Monday, October 12, 2026
spot_img

ನಾಪತ್ತೆಯಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಪ್ರತ್ಯಕ್ಷ : ಸಿಐಡಿ ವಿಚಾರಣೆಗೆ ಹಾಜರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಇದ್ದಕ್ಕಿದ್ದಂತೆಯೇ ಜ್ಞಾನೇಂದ್ರ ಕುಮಾರ್‌ ಅವರು ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇಡಿ ಹಾಗೂ ಸಿಐಡಿ ಅವರಿಗಾಗಿ ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದೀಗ ಅವರಾಗಿಯೇ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗೆ ಸಂಬಂಧಿಸಿದ ಹಗರಣ ಪ್ರಕರಣದಲ್ಲಿ ಸಿಐಡಿ ಜ್ಞಾನೇಂದ್ರ ಕುಮಾರ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿತ್ತು. ನಿನ್ನೆಯೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಹಾಜರಾಗಿದ್ದು, ತನಿಖಾಧಿಕಾರಿ ರಾಘವೇಂದ್ರ ಹೆಗಡೆ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಜ್ಞಾನೇಂದ್ರ ಕುಮಾರ್‌ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುವ ವೇಳೆ ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಇನ್ನೇನು ಇಡಿ ದಾಳಿ ಆಗಬೇಕು ಎನ್ನುವ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಜ್ಞಾನೇಂದ್ರ ಕುಮಾರ್‌ ನಾಪತ್ತೆಯಾಗಿದ್ದರು. ತರಾತುರಿಯಲ್ಲಿ ಒಂದೂವರೆ ಗಂಟೆ ಮುನ್ನ ದೆಹಲಿಗೆ ಫ್ಲೈಟ್‌ ಬುಕ್‌ ಮಾಡಿಕೊಂಡು ಹೋಗಿದ್ದರು. ಮನೆಯಲ್ಲಿ ಒಂದು ದಾಖಲೆಯನ್ನೂ ಬಿಡದೇ ಸಾಮಾಗ್ರಿಗಳನ್ನು ಬಿಡದೇ ಹೋಗಿದ್ದು ನೂರಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಇಡಿ ಅಧಿಕಾರಿಗಳು ಲಖನೌನಲ್ಲಿರುವ ಜ್ಞಾನೇಂದ್ರ ಕುಮಾರ್‌ ಹುಟ್ಟೂರಿಗೆ ಭೇಟಿ ನೀಡಿದ್ದರು. ಸಾಲು ಸಾಲು ಅನುಮಾನಗಳು ಹಾಗೂ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ, ಕೊನೆಗೂ ಜ್ಞಾನೇಂದ್ರ ಕುಮಾರ್ ಇಂದು ಸಿಐಡಿ ಕಚೇರಿಗೆ ಆಗಮಿಸಿದ್ದಾರೆ.

Must Read