Monday, December 11, 2023

Latest Posts

ಮಿಷನ್‌ ಗಗನಯಾನ: ಮಹತ್ವದ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ, ಈ ಕುರಿತು ನೀವು ತಿಳಿದಿರಬೇಕಾದ ಸಂಗತಿಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊನ್ನೆಯಷ್ಟೇ ಖಾಸಗಿ ರಾಕೆಟ್‌ ವಿಕ್ರಮ್-ಎಸ್‌ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಭಾರತ ಇನ್ನೊಂದು ಮಹತ್ವ ಪೂರ್ಣ ಬಾಹ್ಯಾಕಾಶ ಮಿಷನ್‌ ವೊಂದಕ್ಕೆ ಸಜ್ಜಾಗುತ್ತಿದೆ. ʼಮಿಷನ್‌ ಗಗನಯಾನʼದ ಮೂಲಕ ಮಾನವ ಸಹಿತ ರಾಕೆಟ್‌ ಅನ್ನು ನಭಕ್ಕೆ ಚಿಮ್ಮಿಸಿ ಮತ್ತೊಂದು ಸಾಧನೆಯಡೆಗೆ ದಾಪುಗಾಲಿಡುತ್ತಿದೆ ಇಸ್ರೋ. ಈ ಕುರಿತು ಹೊಸ ಬೆಳವಣಿಗೆಯೊಂದು ನಡೆದಿದ್ದು ಮಹತ್ವದ ಪ್ಯಾರಾಚೂಟ್‌ ಪರೀಕ್ಷೆಯಲ್ಲಿ ಇಸ್ರೋ ಸಫಲವಾಗಿದೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (VSSC) ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬಬಿನಾ ಫೀಲ್ಡ್ ಫೈರ್ ರೇಂಜ್ (BFFR) ನಲ್ಲಿ ತನ್ನ ಸಿಬ್ಬಂದಿ ಮಾಡ್ಯೂಲ್ ಡಿಸಲರೇಶನ್ ಸಿಸ್ಟಮ್‌ನ “ಇಂಟಿಗ್ರೇಟೆಡ್ ಮೇನ್ ಪ್ಯಾರಾಚೂಟ್ ಏರ್‌ಡ್ರಾಪ್ ಟೆಸ್ಟ್ (IMAT)” ಅನ್ನು ನಡೆಸಿದ್ದು ಈ ಪರೀಕ್ಷೆ ಯಶಸ್ವಿಯಾಗಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಇದು ತುಂಬಾ ಮಹತ್ತರವಾದ ಬೆಳವಣಿಗೆ. ಇದರಲ್ಲಿ ಅಂಥದ್ದೇನು ಮಹತ್ವ ಎಂದಿರಾ ? ಕಾರಣಹೀಗಿದೆ.

ಮಹತ್ವದ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ:

ಇದು ಬಹಳ ಪ್ರಮುಖ ಬೆಳವಣಿಗೆ, ಏಕೆಂದರೆ ಬಾಹ್ಯಾಕಾಶ ಯಾನವನ್ನುನಸಂಪೂರ್ಣಗೊಳಿಸಿ ಭೂಮಿಯ ಕಕ್ಷೆ ಪ್ರವೇಶಿಸುವ ಗಗನಯಾತ್ರಿಗಳು ನೆಲದ ಮೇಲೆ ಸುರಕ್ಷಿತವಾಗಿ ಇಳಿಯುವುದು ಈ ಪ್ಯಾರಾಚೂಟ್‌ ಗಳ ಮೂಲಕವೇ. ತುಸು ಹೆಚ್ಚು ಕಮ್ಮಿಯಾಗಿ ಕೊನೆಯಘಟ್ಟದಲ್ಲಿ ಗಗನಯಾತ್ರಿಗಳು ಭೂಮಿಯ ಮೇಲೆ ಕಾಲಿಡಲು ವಿಫಲವಾದರೆ ಸಂಪೂರ್ಣ ಮಿಷನ್‌ ವ್ಯರ್ಥವಾಗಿಬಿಡಬಹುದು. ಹಾಗಾಗಿ ಪ್ಯಾರಾಚೂಟ್‌ ಆ ಸಾಮರ್ಥ್ಯವನ್ನು ಹೊಂದಿರಬೇಕು.

ಬಾಹ್ಯಾಕಾಶ ಯಾನದಲ್ಲಿ ಪ್ಯಾರಾಚೂಟ್‌ ಗಳ ಪ್ರಾಮುಖ್ಯತೆಯೇನು ?

ಇದು ಹೆಲಿಕಾಪ್ಟರ್‌ ಗಳಿಂದ ಅಥವಾ ವಿಮಾನಗಳಿಂದ ಸ್ಕೈ ಡೈವಿಂಗ್‌ ಮಾಡಿದಂತಲ್ಲ. ಸಾಧಾರಣ ಸ್ಕೈ ಡೈವಿಂಗ್‌ ಗಳಲ್ಲಿ ವ್ಯಕ್ತಿಯೊಬ್ಬರನ್ನು ಅಥವಾ ಇಬ್ಬರನ್ನು ಪ್ಯಾರಾಚೂಟ್‌ ಹಿಡಿದಿಟ್ಟುಕೊಂಡು ಗಾಳಿಯ ಒತ್ತಡವನ್ನು ಬಳಸಿ ನಿಧಾನವಾಗಿ ನೆಲಕ್ಕಿಳಿಯಲು ಸಹಾಯಕವಾಗುತ್ತದೆ. ಆದರೆ ಬಾಹ್ಯಾಕಾಶ ಯಾನದಲ್ಲಿ ಪ್ಯಾರಾಚೂಟ್‌ ಗಳು ಬೇರೆಯದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ನೇರವಾಗಿ ಗಗನಯಾತ್ರಿಗಳು ಧರಿಸಿಕೊಂಡಿರುವುದಿಲ್ಲ. ಬದಲಾಗಿ ಗಗನಯಾತ್ರಿಗಳಿರುವ ಕ್ಯಾಬಿನ್‌ ನಂತಿರುವ ಸ್ಪೇಸ್‌ ಶಿಪ್‌ ನ ಭಾಗವೊಂದಕ್ಕೆ ಅಳವಡಿಸಿರಲಾಗುತ್ತದೆ. ಟನ್‌ ಗಟ್ಟಲೇ ತೂಕವನ್ನು ಹೊತ್ತು ಪ್ಯಾರಾಚೂಟ್‌ ಭೂಮಿಯ ಗುರುತ್ವಾಕರ್ಷಣ ಶಕ್ತಿಯೊಂದಿಗೆ ಸೆಣೆಸಬೇಕಾಗುತ್ತದೆ. ವೇಗವಾಗಿ ಸ್ಪೇಸ್‌ ಶಿಪ್‌ ಮುನ್ನುಗುವದನ್ನು ನಿಧಾನವಾಗಿಸುವ ಬ್ರೇಕ್‌ ನಂತೆ ಕಾರ್ಯನಿರ್ವಹಿಸಿ ಸುರಕ್ಷಿತ ಲ್ಯಾಂಡಿಂಗ್‌ ಮಾಡಿಸುವಲ್ಲಿ ಪ್ಯಾರಾಚೂಟ್‌ ಬಹಳ ಮುಖ್ಯವಾದುದು. ಹಾಗಾಗಿ ಪ್ಯಾರಾಚೂಟ್‌ ಸಾಧಾರಣ ಪ್ಯಾರಾಚೂಟ್‌ ನಂತಿರುವುದಿಲ್ಲ. ಬದಲಾಗಿ ಇವುಗಳನ್ನು ವಿಶೇಷ ವಸ್ತುಗಳನ್ನು ಬಳಸಿ ವಿನ್ಯಾಸ ಮಾಡಲಾಗುತ್ತದೆ.

ಪ್ರಸ್ತುತ ಈ ಪರೀಕ್ಷೆಯಲ್ಲಿ ಗಗನಯಾತ್ರಿಗಳ ತೂಕಕ್ಕೆ ಸಮನಾದ 5 ಟನ್‌ ಡಮ್ಮಿ ವಸ್ತುವೊಂದನ್ನು 2.5 ಕೀಮೀ ಎತ್ತರದಿಂದ ಭಾರತೀಯ ವಾಯುಪಡೆಯ IL-76 ವಿಮಾನವನ್ನು ಬಳಸಿ ಕೆಳಗೆ ಬಿಡಲಾಗಿದೆ. ಈ ಪರೀಕ್ಷೆಯಲ್ಲಿ ಪ್ಯಾರಾಚೂಟ್‌ ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಬಹು ಕಠಿಣ ಲ್ಯಾಂಡಿಂಗ್‌ಗೆ ದಾರಿ ಸುಗಮವಾಗಿದೆ.

ಇಸ್ರೋ ಮತ್ತು ಡಿಆರ್‌ಡಿಓ ಜಂಟಿ ಕಾರ್ಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗಳು ಜಂಟಿಯಾಗಿ ಈ ಪ್ಯಾರಾಚೂಟ್ ಆಧಾರಿತ ಡಿಸಲರೇಶನ್ ಸಿಸ್ಟಮ್‌ನ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿವೆ. ಗಗನಯಾನ ಯೋಜನೆಯಲ್ಲಿ ಈ ಬೆಳವಣಿಗೆ ಬಹಳ ಮಹತ್ವದ್ದಾಗಿದ್ದು ಗಗನಯಾನ ಯೋಜನೆ ಯಶಸ್ಸಿನತ್ತ ಮುನ್ನಡೆಯಲು ಸಹಾಯಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!