August 22, 2026
Saturday, August 22, 2026
spot_img

ಪಂಚಮಸಾಲಿ ಪೀಠಕ್ಕೆ ಬಂದ ಅನುದಾನ ದುರ್ಬಳಕೆ? ಸರ್ಕಾರಿ ತನಿಖೆಗೆ ವಚನಾನಂದ ಶ್ರೀ ಒತ್ತಾಯ

ಹೊಸದಿಗಂತ ವರದಿ ದಾವಣಗೆರೆ:

ಶ್ರೀಮಠಕ್ಕೆ ಬಂದ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಜಿಲ್ಲೆಯ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಟ್ರಸ್ಟ್ ಉಚ್ಛಾಟಿತ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಠಕ್ಕೆ ಬಂದ ನಂತರ ಸರ್ಕಾರದಿಂದ 12.5 ಕೋಟಿ ರೂ. ಅನುದಾನ ಬಂದಿದೆ. ಸರ್ಕಾರದ ಅನುದಾನ ಬಳಕೆಗೆ ಅದರದ್ದೇ ಆದ ನಿಯಮಗಳಿದ್ದು, ಜನರ ತೆರಿಗೆ ದುಡ್ಡನ್ನು ಶ್ರೀಮಠದ ಅಭಿವೃದ್ಧಿಗೆಂದು ಸರ್ಕಾರ ನೀಡಿದೆ. ಆ ಹಣ ಎಲ್ಲಿಗೆ ಹೋಯಿತೆಂಬುದರ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಬರೀ ಅನುದಾನ ನೀಡುವುದಷ್ಟೇ ಅಲ್ಲ, ಆ ಅನುದಾನದಲ್ಲಿ ಕೆಲಸ ಆಗಿದೆಯಾ, ಇಲ್ಲವಾ? ಎಂಬುದನ್ನೂ ಸರ್ಕಾರ ನೋಡಬೇಕು. ಅಖಂಡ ಪಂಚಮಸಾಲಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದ್ದು, ಫೋರ್ಜರಿ ಸಹಿ ಮಾಡಿ, ದುಡ್ಡು ತೆಗೆದುಕೊಂಡಿದ್ದರ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರವು ನಮ್ಮ ಪಂಚಮಸಾಲಿ ಸಮಾಜಕ್ಕೆ ಅನುದಾನ ನೀಡಿದೆಯೇ ಹೊರತು ಯಾವುದೇ ವ್ಯಕ್ತಿಗಲ್ಲ. ಹಾಗಾಗಿ ಪರಮೇಶ್ವರಗೌಡ ನೇತೃತ್ವದಲ್ಲಿ ಲೆಕ್ಕ ಕೊಡಿ ಚಳವಳಿ ನಡೆಯುತ್ತಿದೆ. ಶ್ರೀಮಠದಲ್ಲಿ ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ ಆಗಿದೆಯಾ, ಇಲ್ಲವಾ? ಎಂಬುದನ್ನು ತಿಳಿದು, ಸರ್ಕಾರ ಮಧ್ಯ ಪ್ರವೇಶಿಸಿ ತನಿಖೆ ಕೈಗೆತ್ತಿಕೊಳ್ಳಲಿ ಎಂದು ಅವರು ನುಡಿದರು.

ಶ್ರೀಮಠದ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರಗೌಡ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !