ಹೊಸದಿಗಂತ ವರದಿ, ಮಡಿಕೇರಿ:
ಕೊರೋನಾ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಘೋಷಿಸಿರುವ ವೀಕೆಂಡ್ ಕರ್ಪ್ಯೂಗೆ ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಹುತೇಕ ಅಂಗಡಿ ಮಳಿಗೆಗಳು ತೆರೆದಿದ್ದರೂ, ಜನರ ಓಡಾಟ ವಿರಳವಾಗಿದ್ದರಿಂದ ವ್ಯಾಪಾರ- ವಹಿವಾಟು ಕ್ಷೀಣಿಸಿತ್ತು.
ಅನಗತ್ಯ ಸಂಚಾರ ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆಗಿಳಿದ ಪೊಲೀಸರು ವಾಹನಗಳನ್ನು ತಡೆದು ವಿಚಾರಣೆ ನಡೆಸುತ್ತಿದ್ದ ಹಾಗೂ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬಹುತೇಕ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸಿದರು.ಆದರೆ ಕೊಡಗಿನ ಗಡಿ ಪ್ರವೇಶಿಸುವ ಸಂಪಾಜೆ, ಕುಶಾಲನಗರಗಳಲ್ಲಿ ಎಂದಿನಂತೆ ವಾಹನಗಳು ಸಂಚರಿಸಿದವು.
ಖಾಸಗಿ ಬಸ್’ಗಳು ರಸ್ತೆಗಿಳಿಯದ ಕಾರಣ ಬೈಕ್, ಕಾರುಗಳ ಓಡಾಟ ಹೆಚ್ಚಾಗಿತ್ತು. ಜನರ ಓಡಾಟ ಕಡಿಮೆಯಿದ್ದುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್’ಗಳೂ ವಿರಳವಾಗಿ ಸಂಚರಿಸಿದವು. ಪರಿಣಾಮವಾಗಿ ತಂಗುದಾಣಗಳಲ್ಲಿ ಬಸ್’ಗಾಗಿ ಕಾದು ಜನ ಹೈರಾಣಾದರು.
ಆಟೋಗಳು ರಸ್ತೆಗಿಳಿದಿದ್ದರೂ, ಬಾಡಿಗೆಯಿಲ್ಲದೆ ಚಾಲಕರು ವೀಕೆಂಡ್ ಕರ್ಪ್ಯೂ ವಿರುದ್ಧ ಕಿಡಿ ಕಾರುತ್ತಿದ್ದರು.ಶನಿವಾರಸಂತೆಯಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಸ ನೀಡದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸಿದರು.