ಮಡಿಕೇರಿಯ ಜಲಸ್ಫೋಟ ಪ್ರದೇಶಕ್ಕೆ ಶಾಸಕದ್ವಯರ ಭೇಟಿ

ಹೊಸದಿಗಂತ ವರದಿ, ಮಡಿಕೇರಿ:

ಮೇಕೇರಿ-ತಾಳತ್ತಮನೆ ಮಾರ್ಗದಲ್ಲಿ ಬಿರುಕು ಬಿಟ್ಟಿರುವ ರಸ್ತೆಯನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮತ್ತು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ಪರಿಶೀಲಿಸಿದರು.
ಬಳಿಕ ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿ ಸೇತುವೆ ಬಳಿ ಜಲಸ್ಫೋಟಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿ ಶಾಸಕರು ವೀಕ್ಷಿಸಿದರು. ನಂತರ ಎರಡನೇ ಮೊಣ್ಣಂಗೇರಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು, 2018ರಲ್ಲಿ 2ನೇ ಮೊಣ್ಣಂಗೇರಿ ಹಾಗೂ ಕಾಟಕೇರಿ ಭಾಗದಲ್ಲಿ ಜಲಸ್ಫೋಟವಾಗಿತ್ತು. ಮತ್ತೆ ಈ ಬಾರಿಯು ಕೂಡಾ ಇಲ್ಲಿ ಬರೆ ಜರಿತವಾಗಿದೆ. ಈ ಭಾಗದ ನಿವಾಸಿಗಳ ಪ್ರಕಾರ ರಾತ್ರಿ 7.30 ರ ಹೊತ್ತಿಗೆ ಜೋರಾದ ಶಬ್ಧ ಬಂದಿದೆ. ನಂತರ ಸ್ಥಳೀಯರು ಬಂದು ನೋಡಿದಾಗ ಬರೆ ಜರಿದಿರುವುದು ಗೋಚರಿಸಿದೆ ಎಂದರು.
ಜನರ ಸ್ಥಳಾಂತರ: ರಾಮಕೊಲ್ಲಿ ಸೇತುವೆ ವಿಸ್ತಾರವಾದ ಸೇತುವೆಯಾಗಿದ್ದು, ಬರೆಜರಿತದಿಂದ ಸೇತುವೆಯ ಅರ್ಧ ಭಾಗಕ್ಕೆ ಹಾನಿಯಾಗಿದೆ. ಬರೆ ಜರಿತಕ್ಕೆ ವೈಜ್ಞಾನಿಕವಾಗಿ ನಿಜವಾದ ಕಾರಣ ಪತ್ತೆ ಹಚ್ಚಬೇಕಾಗಿದೆ. ಈ ಭಾಗದ ಮನೆಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ ಎಂದರು.
ಕಾಳಜಿ‌ ಕೇಂದ್ರ: ಕಾಟಕೇರಿಯ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಾಡಲು ಸೂಚಿಸಲಾಗಿದೆ. ಈ ಭಾಗದ ಜನರು ಕೂಲಿ ಕೆಲಸ ಮಾಡುವವರಾಗಿದ್ದು, ಅವರಿಗೆ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, ಮೊಣ್ಣಂಗೇರಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಈ ಭಾಗದ ಜನರು ಒಪ್ಪಿಗೆ ನೀಡಿದಲ್ಲಿ, ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿಸಲಾಗುವುದು ಎಂದರು.
ಬರೆಜರಿತದಿಂದ ನೀರಿನೊಂದಿಗೆ ಮರದ ದಿಮ್ಮಿಗಳು ಹರಿದು ಬಂದು ಸೇತುವೆಯ ಬಳಿ ನಿಂತಿದೆ. ಅದನ್ನು ಗ್ರಾ.ಪಂ. ವತಿಯಿಂದ ತೆರವು ಮಾಡಲು ಸೂಚಿಸಲಾಗುವುದು. ಅಪಾಯದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಈಗಾಗಲೇ ಅವರವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.
ಪ್ರಮುಖರಾದ ಧನಂಜಯ ಅಗೋಳಿಕಜೆ, ಗ್ರಾ.ಪಂ.ಸದಸ್ಯರಾದ ಪುಷ್ಪಾವತಿ, ಪಿಡಿಒ ಶಶಿಕಿರಣ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!