ಹೊಸ ದಿಗಂತ ವರದಿ, ನಾಗಮಂಗಲ:
ಸಾಲ ಬಾಧೆಯಿಂದ ಬೇಸತ್ತ ವ್ಯಕ್ತಿ ಮೊಬೈಲ್ ಟವರ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಸಂಭವಿಸಿದೆ.
ತಾಲೂಕಿನ ಬೆಳ್ಳೂರು ಪಟ್ಟಣದ ಲೇಟ್ ಮಲ್ಲಣ್ಣಶೆಟ್ಟಿ ಎಂಬುವರ ಮಗ ಬಿ.ಎಂ.ರಾಘವೇಂದ್ರ ಎಂಬ ವ್ಯಕ್ತಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು, ನೇಣು ಬಿಗಿದುಕೊಳ್ಳುವ ಮುನ್ನ ತನ್ನ ಪತ್ನಿ ಮಾನಸ ಅವರಿಗೆ ದೂರವಾಣಿ ಕರೆ ಮಾಡಿ, ನಾನು ಮನೆಯ ಹಿಂಭಾಗದ ತೋಟದಲ್ಲಿನ ಮೊಬೈಲ್ ಟವರ್‌ಗೆ ನೇಣು ಹಾಕಿಕೊಳ್ಳುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದರು ಎಂದು ಮೃತನ ಪತ್ನಿ ಮಾನಸ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಮೃತ ರಾಘವೇಂದ್ರ ಕಳೆದ 13ವರ್ಷಗಳ ಹಿಂದೆ ಮಾನಸಳನ್ನು ಪ್ರೀತಿಸಿ ವಿವಾಹವಾಗಿದ್ದು, 9ವರ್ಷದ ಹೆಣ್ಣು ಮಗು ಮತ್ತು 6ವರ್ಷದ ಗಂಡು ಮಗುವಿದೆ. ಜೀವನ ನಿರ್ವಹಣೆಗಾಗಿ ಬೆಳ್ಳೂರು ಕ್ರಾಸ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು. ಅಲ್ಲದೇ ವ್ಯವಹಾರದ ಉದ್ದೇಶಕ್ಕಾಗಿ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸುವ ಕುರಿತು ಒತ್ತಡಕ್ಕೆ ಒಳಗಾಗಿ ಹಲವು ಬಾರಿ ಪತ್ನಿಯೊಂದಿಗೆ ಹೇಳಿಕೊಂಡಿದ್ದನು ಎನ್ನಲಾಗಿದೆ. ಪತ್ನಿ ಸಾಲ ತೀರಿಸಿಕೊಂಡರಾಯಿತು ತಲೆ ಕೆಡಿಸಿಕೊಳ್ಳಬೇಡಿ ಎಂದು ಹಲವು ಬಾರಿ ಸಮಾದಾನ ಮಾಡಿದ್ದರೂ, ಪತ್ನಿಗೆ ನೇಣಿಗೆ ಶರಣಾಗಿದ್ದಾನೆ.
ಪತಿ ಫೋನ್ ಮಾಡಿದ ನಂತರ ಪತ್ನಿ ಮಾನಸ ಗಾಬರಿಗೊಂಡು ಸಂಬಂಧಿಕರೊಂದಿಗೆ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಮೊಬೈಲ್ ಟವರ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿದ್ದನು. ಜೀವವಿರಬಹುದೆಂದು ತಿಳಿದು ತಕ್ಷಣ ಸಮೀಪದ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಾಡಿದ ಸಾಲ ತೀರಿಸಲಾಗದೇ ಜಿಗುಪ್ಸೆಗೊಂಡು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.