Tuesday, September 27, 2022

Latest Posts

ಕೊರೋನಾ ಕಾಲದಲ್ಲಿ ’ಮಿಸ್ ಕಾಲ್ ಕೊಡಿ ಪಾಠ ಕೇಳಿ ಅಭಿಯಾನ’ ಆರಂಭಿಸಿದ ಶಿಕ್ಷಕನಿಗೆ ಸನ್ಮಾನ

-ಎಂ.ಜೆ.ತಿಪ್ಪೇಸ್ವಾಮಿ

ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಪಿ.ಉಮೇಶ್ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರ ಉತ್ತಮ ಸೇವೆಯನ್ನು ಗುರುತಿಸಿರುವ ಶಿಕ್ಷಣ ಇಲಾಖೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೇಂದ್ರ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಹೊಳಲ್ಕೆರೆ ತಾಲ್ಲೂಕಿನ ತೊಡರನಹಾಳ್ ಗ್ರಾಮದ ಸಾಸಲರ ಪರಮೇಶ್ವರಪ್ಪ ಹಾಗೂ ಜಯಮ್ಮ ದಂಪತಿಯ ಜೇಷ್ಟ ಪುತ್ರರಾಗಿ ಉಮೇಶ್ ಜನಿಸಿದರು. ತಾಯಿಯ ತವರೂರು ಸಿರಿಗೆರೆ ಬಳಿಯ ಹನುಮನಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ಬಳಿಕ ಸಿರಿಗೆರೆಯಲ್ಲಿ ಪ್ರೌಢಶಿಕ್ಷಣ, ಪಿಯುಸಿಯಲ್ಲಿ 9ನೇ ರ‍್ಯಾಂಕ್ ಗಳಿಸಿ, ಬಡತನದ ಕಾರಣ ಉನ್ನತ ಶಿಕ್ಷಣದ ಬದಲು ಚಿತ್ರದುರ್ಗದ ಸರ್ಕಾರಿ ಶಿಕ್ಷಕರ ತರಬೇತಿ ಶಾಲೆಯಲ್ಲಿ ಟಿಸಿಹೆಚ್ ಮುಗಿಸಿದರು.

ಬಳ್ಳಾರಿ ಜಿಲ್ಲೆ ಚಿಕ್ಕಬಳ್ಳಾರಿಯಲ್ಲಿ 2004 ರ ಜನವರಿಯಲ್ಲಿ ಪ್ರಪ್ರಥಮವಾಗಿ ಶಿಕ್ಷಕ ವೃತ್ತಿ ಆರಂಭಿಸಿಸ ಅವರು, ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಕೇಶವಾಪುರ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಬಳಿಕ ಹೊಳಲ್ಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಅಮೃತಾಪುರ ಶಾಲೆಗೆ ವರ್ಗಾವಣೆಗೊಂಡರು. ಎಂಎ, ಎಇಡಿ ಪದವೀಧರ ಟಿ.ಪಿ.ಉಮೇಶ್ ಕಳೆದ 12 ವರ್ಷಗಳಿಂದ ಅಮೃತಾಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಕೆಲಸಕ್ಕೆ ರಜೆ ಹಾಕದೆ ಕರ್ತವ್ಯ ನಿರ್ವಹಿಸಿದ್ದಾರೆ. ಶಾಲೆಯಲ್ಲೇ ಉಳಿದು ಆನ್‌ಲೈನ್ ಪಾಠ ಬೋಧಿಸಿರುತ್ತಾರೆ. ನೆಟ್ ಇಲ್ಲದ ಮಕ್ಕಳ ಮೊಬೈಲ್‌ಗೆ ಇವರೇ ಕರೆಮಾಡಿ ಪಾಠ ಹೇಳಿದ್ದಾರೆ. ಕರೆನ್ಸಿ ಇಲ್ಲದ ಬಡಮಕ್ಕಳು ಮಿಸ್‌ಕಾಲ್ ಕೊಟ್ಟರೆ ಇವರೇ ಕರೆಮಾಡಿ ಪಾಠ ಬೋಧಿಸಿದ್ದಾರೆ. ಕೊರೋನಾ ಕಾಲದಲ್ಲಿ ’ಮಿಸ್ ಕಾಲ್ ಕೊಡಿ ಪಾಠ ಕೇಳಿ ಅಭಿಯಾನ’ ಆರಂಭಿಸಿದ ಇವರು ಎರಡು ವರ್ಷದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಇವರ ನಿಸ್ವಾರ್ಥ ಹಾಗೂ ಪರಿಶ್ರಮದ ಶೈಕ್ಷಣಿಕ ಸೇವೆಗೆ 2017 ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. 2013 ಹಾಗೂ 2019 ರಲ್ಲಿ ರೋಟರಿ ಇಂಟರ್ ನ್ಯಾಷನಲ್‌ನಿಂದ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿದ್ದಾರೆ. ಪತ್ನಿ ಟಿ.ಬಿ.ಅನಿತಾ ಸಹ ವಿಜ್ಞಾನ ಶಿಕ್ಷಕರಾಗಿದ್ದು, ನ್ಯಾಷನಲ್ ಇನ್ನೋವೇಟಿವ್ ಟೀಚರ್ ಅವಾರ್ಡಿ ಆಗಿದ್ದಾರೆ. ಈ ಬಹುಮುಖ ಪ್ರತಿಭೆಯ ಶಿಕ್ಷಕನ ಶ್ರಮದಿಂದ ಹಿಂದುಳಿದ ಹೊಳಲ್ಕೆರೆ ಅಮೃತಾಪುರ ಶಾಲೆ ಹೈಟೆಕ್ ಆಗಿದೆ.

ಶಾಲೆಯಲ್ಲಿದ್ದ ಮೂರು ಕೊಠಡಿಗಳಲ್ಲಿ ಪ್ರಕೃತಿ ವಿಕೋಪದಿಂದ 2015 ರಲ್ಲಿ ಎರಡು ಕೊಠಡಿಗಳು ಬಿದ್ದು ಹೋದವು. ಸರ್ಕಾರದ ನೆರವು ಸಿಗದಿದ್ದಾಗ ಎರಡು ವರ್ಷ ಗ್ರಾಮದ ಗುಡಿ, ಮರದ ನೆರಳಿನಲ್ಲಿ, ತಾತ್ಕಾಲಿಕ ಟೆಂಟ್‌ನಲ್ಲಿ ತರಗತಿಗಳನ್ನು ನಡೆಸಿದ್ದರು. 2016 ರಲ್ಲಿ  ರೋಟರಿ ಬೆಂಗಳೂರು ಎಂಬ ಸಂಸ್ಥೆ ಸಂಪರ್ಕಿಸಿ ಅವರ ಸಹಕಾರದಿಂದ 30 ಲಕ್ಷ ರೂಗಳಲ್ಲಿ ಸುಸಜ್ಜಿತ ನಾಲ್ಕು ಕೊಠಡಿಗಳು ಹಾಗೂ ಬಾಲಕ, ಬಾಲಕಿಯರಿಗೆ ಶೌಚಾಲಯ ನಿರ್ಮಿಸಲು ನೆರವು ಪಡೆದರು.

ಮಕ್ಕಳಿಗೆ ಬೆಂಗಳೂರು ರೋಟರಿಯಿಂದ 20 ಮರದ ಡೆಸ್ಕ್ ಹಾಗೂ 60 ರೀಡಿಂಗ್ ಟೇಬಲ್ ಮತ್ತು ವಾಟರ್ ಫಿಲ್ಟರ್ ಸೇರಿ 3 ಲಕ್ಷ ರೂ.ಗಳ ವಸ್ತುಗಳ ದೇಣಿಗೆ ಪಡೆದಿದ್ದಾರೆ. ಸ್ಥಳೀಯ ದಾನಿಗಳಿಂದ 3 ಲಕ್ಷ ರೂ.ಗಳಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಸ್ನೇಹಿತ ದಾನಿಗಳಿಂದ 1 ಲಕ್ಷ ರೂ. ಮೌಲ್ಯದ 3 ಲ್ಯಾಪ್‌ಟಾಪ್ ಪಡೆದು ಲ್ಯಾಬ್ ನಿರ್ಮಿಸಿ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಏನೇ ತೊಂದರೆ ಇದ್ದರೂ ಯಾವತ್ತೂ ಮಕ್ಕಳ ದಾಖಲಾತಿ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ.

ಕೇವಲ ಶಿಕ್ಷಕರಾಗಿ ಕೆಲಸ ಮಾಡಿದ್ದಲ್ಲದೇ ವಿವಿಧ ವಿಷಯಗಳ ಶಿಕ್ಷಕರಿಗೂ ತರಬೇತಿ ನೀಡಿದ್ದಾರೆ. ನಲಿ-ಕಲಿ, ಕನ್ನಡ ಸಮಾಜ ಪರಿಸರ ವಿಷಯಾಧಾರಿತ, ಜೀವನ ವಿಜ್ಞಾನ, ಯೋಗ ಮುಂತಾದ ಪಠ್ಯಾಧಾರಿತ ಹಾಗೂ ಅಅಇ ಮೌಲ್ಯಮಾಪನ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸಂಪನ್ಮೂಲ ಸಾಹಿತ್ಯ ತಯಾರಿಯಲ್ಲಿ ತೊಡಗಿಕೊಂಡು 2 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಶೈಕ್ಷಣಿಕ ತರಬೇತಿ ನೀಡಿದ್ದಾರೆ.
ಶಿಕ್ಷಕರು, ಸೃಜನಶೀಲ ಬರಹಗಾರರಾಗಿರುವ ಇವರು, 6 ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ವಚನಾಂಜಲಿ, ಫೋಟೊಕ್ಕೊಂದು ಫ್ರೇಮು, ಅಪ್ಪ ಕೊಡಿಸಿದ ಮೊದಲ ಪುಸ್ತಕ, ವಚನವಾಣಿ, ದೇವರಿಗೆ ಬೀಗ ಎಂಬ ಸಾಹಿತ್ಯಿಕ ಶೈಕ್ಷಣಿಕ ಕೃತಿಗಳ ರಚಿಸಿದ್ದಾರೆ. ಇವರ ಪರಿಶ್ರಮಕ್ಕೆ 2021ನೇ ಸಾಲಿನಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಈಗ 2022ನೇ ಸಾಲಿನ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!