ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ಮೋದಿ ಸರ್ಕಾರ ಅಸ್ತು- ನೀವು ತಿಳಿದಿರಬೇಕಾದ ಹೋರಾಟದ ಹೆಜ್ಜೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜ್ಯದ ಪಾಲಿಗೆ ಅತ್ಯಂತ ಮುಖ್ಯ ಎಂದೆನಿಸಿರುವ, ಉತ್ತರಕರ್ನಾಟಕದ ಜನತೆಗೆ ಕುಡಿಯುವ ನೀರು ಪೂರೈಸುವ ಬಹುಚರ್ಚಿತ ಮಹತ್ವಾಕಾಂಕ್ಷಿ ಯೋಜನೆಯಾದ ʼಕಳಸಾ-ಬಂಡೂರಿʼ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕಳೆದ ಎರಡು ದಶಕಗಳಿಂದ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕವು ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ʼಕಳಸಾ-ಬಂಡೂರಿʼ ಯೋಜನೆ, ʼಮಹದಾಯಿ ಹೋರಾಟʼ ಎಂದೂ ಕರೆಯಲ್ಪಡುವ ಈ ಹೋರಾಟದ ಬಗ್ಗೆ ನೀವು ತಿಳಿದಿರ ಬೇಕಾದ ಕೆಲ ಅಂಶಗಳ ಮಾಹಿತಿ ಇಲ್ಲಿದೆ.

ಈ ಯೋಜನೆಗೆ ʼಮಹದಾಯಿ ಕುಡಿಯುವ ನೀರಿನ ಯೋಜನೆʼ ಎಂತಲೂ ಕರೆಯಲಾಗುತ್ತದೆ. ಮಹದಾಯಿ ನದಿಯು ಬೆಳಗಾವಿ ಜಿಲ್ಲೆಯ ಭೀಮಗಢ ವನ್ಯಜೀವಿ ಅಭಯಾರಣ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಟ್ಟಿ ಕರ್ನಾಟಕದ ಮೂಲಕ ಪಕ್ಕದ ಗೋವಾಗೆ ಪಶ್ಚಿಮಾಭಿಮುಖವಾಗಿ ಹರಿದು ಅಲ್ಲಿಂದ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗೋವಾದಲ್ಲಿ ಈ ನದಿಯನ್ನು ʼಮಾಂಡೋವಿʼ ಎನ್ನಲಾಗುತ್ತದೆ. ಮಹದಾಯಿಯು ಕರ್ನಾಟಕದಲ್ಲಿ ಸುಮಾರು 35 ಕಿಮೀ ಹಾಗು ಗೋವಾದಲ್ಲಿ 82ಕಿಮಿ ಪ್ರದೇಶದಲ್ಲಿ ಹರಿಯುತ್ತದೆ. ಉತ್ತರ ಕರ್ನಾಟಕದ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಇರುವುದರಿಂದ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹರಿಯುವ ಮಹದಾಯಿ ನದಿಯ ನೀರನ್ನು ಕಳಸಾ ಹಾಗೂ ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ಅಣೆಕಟ್ಟಿನಲ್ಲಿ ಸಂಗ್ರಹಿಸಿ ಆ ನೀರನ್ನು ಉತ್ತರಕರ್ನಾಟಕದ ಮೂರು ಮುಖ್ಯ ಜಿಲ್ಲೆಗಳಾದ ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕುರಿತು ಕರ್ನಾಟಕ ಸರ್ಕಾರವು ಚಿಂತಿಸಿತು.

ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ನೀರನ್ನು ಹರಿಸುವ ಕುರಿತು ಚಿಂತಿಸಲಾಗಿದ್ದರಿಂದ ಈ ಯೋಜನೆಗೆ ʼಕಳಸಾ-ಬಂಡೂರಿʼ ಯೋಜನೆಯೆಂಬ ಹೆಸರೂ ಇದೆ. 1978ರಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ಅನುಷ್ಟಾನಕ್ಕೆ ಚಿಂತಿಸಲಾಯಿತು. ಎಸ್.ಆರ್.ಬೊಮ್ಮಾಯಿಯವರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿಸಲಾಯಿತು. 1980ರಲ್ಲಿ ವರದಿ ಸಿದ್ಧವಾಯಿತು. 1988ರಲ್ಲಿ ಕರ್ನಾಟಕ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ ಗೋವಾ ಸರ್ಕಾರ ಇದನ್ನು ವಿರೋಧಿಸಿತು. ನಂತರದಲ್ಲಿ ಎಸ್‌.ಆರ್.ಬೊಮ್ಮಾಯಿಯವರು 1989ರಲ್ಲಿ ಗೋವಾದ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಗೋವಾ ಸರ್ಕಾರವನ್ನು ಒಪ್ಪಿಸಿದರು. ನಂತರದಲ್ಲಿ ʼಕಳಸಾ-ಬಂಡೂರಿʼಯಲ್ಲಿ ನಾಲೆ ನಿರ್ಮಿಸಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿತು. ಕಳಸಾ-ಬಂಡೂರಿಯಲ್ಲಿ ನಾಲೆಗಳ ನಿರ್ಮಾಣಕ್ಕೆ ಒಟ್ಟೂ 94 ಕೋಟಿ ರೂಪಾಯು ವೆಚ್ಚದ ಯೋಜನೆ ಸಿದ್ಧವಾಯಿತು. 2002ರಲ್ಲಿ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿತು. ಆದರೆ ಗೋವಾ ಸರ್ಕಾರ ಮತ್ತೆ ತಕರಾರು ಪ್ರಾರಂಭಿಸಿತು. ಈ ಕುರಿತು ಸಮಿತಿ ರಚಿಸುವಂತೆ ಒತ್ತಾಯಿಸಿತು. ಆಗ ಕೇಂದ್ರ ಜಲಸಂಪನ್ಮೂಲ ಇಲಾಖೆ ಈ ಯೋಜನೆಗೆ ತಡೆಹಿಡಿಯಿತು. ಅಲ್ಲಿಂದ ವಿವಾದ ಮುಂದುವರೆದು 2006ರಲ್ಲಿ ಬೆಳಗಾವಿಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು ಕರ್ನಾಟಕ ಮುಂದಾಯಿತು. ಗೋವಾ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. 2010ರಲ್ಲಿ ಮಹದಾಯಿ ಜಲವಿವಾದ ಪರಿಹರಿಸಲು ಸಮಿತಿ ನೇಮಿಸಲಾಯಿತು.

2014ರಲ್ಲಿ ಸಮಿತಿ ಸದಸ್ಯರು ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2015ರಿಂದ ಈಚೆಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಜಾರಿ ಮಾಡುವಂತೆ ವ್ಯಾಪಕ ಹೋರಾಟಗಳು ನಡೆಯುತ್ತಿವೆ. ಪ್ರಸ್ತುತ ಮೋದಿ ಸರ್ಕಾರ ಈ ಕುರಿತು ಕ್ರಮ ಕೈಗೊಂಡಿದ್ದು, ಕರ್ನಾಟಕಕ್ಕೆ ಮುಖ್ಯವಾಗಿ ಅಗತ್ಯವಿರುವ ಈ ಅತ್ಯಂತ ಪ್ರಮುಖ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಹಲವಾರು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲದೇ ಪರದಾಡುತ್ತಿದ್ದ ಉತ್ತರ ಕರ್ನಾಟಕದವರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!