ಕಚೇರಿಯಲ್ಲಿ ಇನ್ನೂ ಮೋದಿ ಫೋಟೋ: ಪಕ್ಷ ಬದಲಾದ ತಕ್ಷಣ ಚಿತ್ರ ತೆಗೆಯುವುದು ನನ್ನ ಸಂಸ್ಕೃತಿ ಅಲ್ಲ ಎಂದ ಜಗದೀಶ್ ಶೆಟ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಬಿಜೆಪಿ ಬಿಟ್ಟು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಆದ್ರೆ ತಮ್ಮ ಕಚೇರಿಯಲ್ಲಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟೋ ತೆಗೆದಿಲ್ಲ. ಈ ಕುರಿತು ಕೇಳಿದಾಗ , ಹಾಗೆ ಮಾಡುವುದು ನನ್ನ ಸಂಸ್ಕೃತಿ ಅಲ್ಲ, ನನ್ನ ಜಾಯಮಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಜಗದೀಶ್ ಶೆಟ್ಟರ್ ಅವರು ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ಆದರೆ ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರುಗಳ ಫೋಟೋಗಳು ಕಚೇರಿಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಈ ವಿಚಾರ ಈಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸ್ವಾಭಾವಿಕವಾಗಿ, ಪಕ್ಷವು ಬದಲಾಗುತ್ತಿದ್ದಂತೆ, ಕಚೇರಿಯಲ್ಲಿ ಹೆಗ್ಗುರುತುಗಳಾಗಿ ರಾರಾಜಿಸುವ ಫೋಟೋಗಳನ್ನು ಕಿತ್ತೊಗೆದು, ತಮ್ಮ ರಾಜಕೀಯ ನಿಲುವಿಗೆ ಒಗ್ಗುವಂತಹ ಹಾಲಿ ಪಕ್ಷದ ಫೋಟೋಗಳನ್ನು ಹಾಕುವುದು ವಾಡಿಕೆಯಾಗಿದೆ. ಆದರೆ ಅದು ನನಗೆ ಇಷ್ಟವಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸೂಚಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬದಲಾದ ತಕ್ಷಣ ಹಿಂದಿನ ನಾಯಕರ ಚಿತ್ರಗಳನ್ನು ತೆಗೆಯುವುದು ಒಳ್ಳೆಯ ಸಂಪ್ರದಾಯವಲ್ಲ. ನಾನು ಅದನ್ನು ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ ಎಂದು ಈ ಹಿಂದೆಯೂ ಸಾಕಷ್ಟು ಬಾರಿ ಹೇಳಿದ್ದೇನೆ. ಈ ಚುನಾವಣೆ ನನ್ನ ಸ್ವಾಭಿಮಾನದ ಹೋರಾಟವೇ ಹೊರತು ರಾಜಕೀಯ ಆಕಾಂಕ್ಷೆಗಾಗಿ ಅಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಹಾಗಾಗಿ ಬೇಷರತ್ತಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!