ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲೇ ಭಾಷಣ ಆರಂಭಿಸುವುದು ಇದೇ ಮೊದಲ ಬಾರಿ ಏನಲ್ಲ. ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಿದ ಬಳಿಕ ಕೆಲಸಾಲುಗಳನ್ನು ಕನ್ನಡದಲ್ಲೇ ಮಾತನಾಡಿದರು ಪ್ರಧಾನಿ ನರೇಂದ್ರ ಮೋದಿ.
ಆದರೆ ಇದಕ್ಕಿಂತ ವಿಶೇಷ ಏನೆಂದರೆ, ಪ್ರಧಾನಿ ಮೋದಿ ಮತ್ತವರ ಸಹಾಯಕ ತಂಡವು ಆಯಾ ಪ್ರದೇಶ ಮತ್ತು ಅಲ್ಲಿನ ಕಾರ್ಯಕ್ರಮದ ಸಂದರ್ಭಕ್ಕೆ ತಕ್ಕಂತೆ ಸಿದ್ಧಪಡಿಸಿಕೊಂಡು ಬಂದು ಮೋದಿ ಮಾತುಗಳ ಮೂಲಕ ಪ್ರಸ್ತುತಿಯಾಗುವ ಸಂಸ್ಕೃತಿ ಸೊಗಡು.
ಶುಕ್ರವಾರದ ಮೋದಿ ಕಾರ್ಯಕ್ರಮದಲ್ಲಿ ಅವರು ತಮ್ಮ ಭಾಷಣದಲ್ಲಿ ಸಹಜವಾಗಿಯೇ ಕನಕದಾಸರನ್ನು ನೆನಪಿಸಿಕೊಂಡರು, ಏಕೆಂದರೆ ಇಂದು ಕನಕದಾಸ ಜಯಂತಿ. ಆದರೆ, ಅವರು ಉದಾಹರಣೆ ಮುಂದಿಟ್ಟಿದ್ದು ಮಾತ್ರ ಕರ್ನಾಟಕದವರನ್ನೂ ಚಕಿತಗೊಳಿಸುವಂತಿತ್ತು. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ಕೊಟ್ಟಿದ್ದಾರೆ ಅಂತ ಹೇಳಿದ್ದು ಅಷ್ಟೇನೂ ವಿಶೇಷ ಅಂಶವಲ್ಲ. ಆದರೆ, ಜಗತ್ತು ಇವತ್ತಿಗೆ ಪೌಷ್ಟಿಕತೆ ದೃಷ್ಟಿಯಿಂದ ಯೋಚಿಸುತ್ತಿರುವ ಸಿರಿಧಾನ್ಯಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸುತ್ತ, ಆ ವಿಷಯದಲ್ಲಿ ಕನಕದಾಸರನ್ನು ನೆನಪಿಸಿಕೊಂಡಿದ್ದು ವಿಶೇಷ.
“ಸಿರಿಧಾನ್ಯಗಳನ್ನು ಪ್ರಚಲಿತಕ್ಕೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸಿರಿಧಾನ್ಯಗಳ ಮಹತ್ವದ ಬಗ್ಗೆ ಕನಕದಾಸರು ತಮ್ಮ ಕಾಲದಲ್ಲೇ ಸಾರಿದ್ದರು. ಅವರ ರಾಮಧಾನ್ಯ ಚರಿತೆ ಸಿರಿಧಾನ್ಯಗಳ ಬಗ್ಗೆ ಮಾತನಾಡುತ್ತದೆ. ರಾಗಿಯ ಮಹತ್ವ ಅವರು ಹೇಳಿದ್ದಾರೆ” ಎಂಬುದನ್ನೆಲ್ಲ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ರಾಗಿ ತಂದೀರಾ…
ಮೋದಿಯವರ ಮಾತುುಗಳ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಕನಕದಾಸರ ಹಲವು ರಚನೆಗಳಲ್ಲಿ ಹೀಗೆ ಧಾನ್ಯಗಳನ್ನು ಪ್ರಸ್ತಾಪಿಸುತ್ತ ಮತ್ತೇನೋ ತತ್ತ್ವವನ್ನು ಹೇಳುವ ಪ್ರಯತ್ನಗಳೆಲ್ಲ ಉದ್ದಕ್ಕೂ ಕಂಡುಬರುತ್ತವೆ.
ಉದಾಹರಣೆ1
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು || ಪ || ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…
ಉದಾಹರಣೆ2
ಕೆಲರು ಗೋದಿಯ ಸಾಮೆಯನು ಕೆಲ
ಕೆಲರು ನವಣೆಯ ಕಂಬು ಜೋಳವ
ಕೆಲರು ಹಾರಕವೆಂದು ಕೆಲವರು ನೆಲ್ಲನತಿಶಯವ
ಕೆಲರು ನರೆದಲೆಗನನು ಪತಿಕರಿ
ಸಲದ ನೋಡಿದ ನೃಪತಿಯದರೊಳು
ಹಲವು ಮತವೇಕೊಂದನೇ ಪೇಳೆನಲು ಗೌತಮನು