ಅಸ್ಸಾಂಗೆ ಬಂದಿಳಿದ ಪ್ರಧಾನಿ ಮೋದಿ: ಹಲವು ಯೋಜನೆಗಳಿಗೆ ಶಂಕುಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಸ್ಸಾಂಗೆ ಭೇಟಿ ನೀಡಿದ್ದಾರೆ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದಿಪುಗೆ ಬಂದಿಳಿದ ಮೋದಿಯವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಕ ‘ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ್ಯಾಲಿ’ಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಿಕ್ಷಣ ಕ್ಷೇತ್ರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ರು. ಪಶುವೈದ್ಯಕೀಯ ಕಾಲೇಜು (ದಿಪು), ಪದವಿ ಕಾಲೇಜು (ಪಶ್ಚಿಮ ಕರ್ಬಿ ಆಂಗ್ಲಾಂಗ್) ಮತ್ತು ಕೃಷಿ ಕಾಲೇಜು (ಕೊಲೊಂಗಾ, ಪಶ್ಚಿಮ ಕರ್ಬಿ ಆಂಗ್ಲಾಂಗ್) ಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 500 ಕೋಟಿಗೂ ಹೆಚ್ಚು ಮೌಲ್ಯದ ಈ ಯೋಜನೆಗಳು ಈ ಪ್ರದೇಶದಲ್ಲಿ ಕೌಶಲ್ಯ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ತರಲಿವೆ.

ಕಾರ್ಯಕ್ರಮದಲ್ಲಿ ಪ್ರಧಾನಿಯವರು 2,950ಕ್ಕೂ ಹೆಚ್ಚು ಅಮೃತ ಸರೋವರ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಈ ಅಮೃತ ಸರೋವರದ ಯೋಜನೆಗಳನ್ನು ಸುಮಾರು 1,150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲಿದೆ.
ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ್ಯಾಲಿಯಲ್ಲಿ ಪ್ರಧಾನಮಂತ್ರಿಯವರ ಭಾಷಣವು ಇಡೀ ದೇಶದಲ್ಲಿ ಶಾಂತಿ ಕ್ರಮಗಳಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದು PMO ಹೇಳಿಕೆಯಲ್ಲಿ ತಿಳಿಸಿದೆ. ಇಂದು ಮಧ್ಯಾಹ್ನ 01:45 ರ ಸುಮಾರಿಗೆ ಪ್ರಧಾನಮಂತ್ರಿಯವರು ಅಸ್ಸಾಂ ವೈದ್ಯಕೀಯ ಕಾಲೇಜು ದಿಬ್ರುಗಢ್ ಕ್ಯಾನ್ಸರ್ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಅರ್ಪಣೆ ಮಾಡಿದರು. ಈ ವೇಳೆ ಪ್ರದರ್ಶನ ಮಾಡಿದ ದೇಶೀ ಸೊಗಡಿನ ನೃತ್ಯಕ್ಕೆ ಮೋದಿ ತಲೆದೂಗಿದರು.

3 ಗಂಟೆ ಸುಮಾರಿಗೆ ಉಳಿದ ಆರು ಕ್ಯಾನ್ಸರ್ ಆಸ್ಪತ್ರೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮಾಡಿದರು. ದಿಬ್ರುಗಢದಲ್ಲಿ, ಅಸ್ಸಾಂ ಕ್ಯಾನ್ಸರ್ ಕೇರ್ ಫೌಂಡೇಶನ್, ಅಸ್ಸಾಂ ಸರ್ಕಾರ ಮತ್ತು ಟಾಟಾ ಟ್ರಸ್ಟ್‌ಗಳ ಜಂಟಿ ಉದ್ಯಮವಾಗಿದ್ದು, ರಾಜ್ಯದಾದ್ಯಂತ ಹರಡಿರುವ 17 ಕ್ಯಾನ್ಸರ್ ಕೇರ್ ಆಸ್ಪತ್ರೆಗಳೊಂದಿಗೆ ದಕ್ಷಿಣ ಏಷ್ಯಾದ ಅತಿದೊಡ್ಡ ಕೈಗೆಟುಕುವ ಕ್ಯಾನ್ಸರ್ ಆರೈಕೆ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.

ಯೋಜನೆಯ 1 ನೇ ಹಂತದ ಅಡಿಯಲ್ಲಿ, 10 ಆಸ್ಪತ್ರೆಗಳಲ್ಲಿ ಏಳು ಆಸ್ಪತ್ರೆಗಳ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಮೂರು ಆಸ್ಪತ್ರೆಗಳು ನಿರ್ಮಾಣ ಹಂತದಲ್ಲಿವೆ. ಪೂರ್ಣಗೊಂಡ ಏಳು ಕ್ಯಾನ್ಸರ್ ಆಸ್ಪತ್ರೆಗಳನ್ನು ಪ್ರಧಾನ ಮಂತ್ರಿ ಉದ್ಘಾಟನೆ ಮಾಡಿದ್ದಾರೆ. ಈ ಕ್ಯಾನ್ಸರ್ ಆಸ್ಪತ್ರೆಗಳನ್ನು ದಿಬ್ರುಗಢ್, ಕೊಕ್ರಜಾರ್, ಬಾರ್ಪೇಟಾ, ದರ್ರಾಂಗ್, ತೇಜ್‌ಪುರ, ಲಖಿಂಪುರ ಮತ್ತು ಜೋರ್ಹತ್‌ನಲ್ಲಿ ನಿರ್ಮಿಸಲಾಗಿದೆ.
ಧುಬ್ರಿ, ನಲ್ಬರಿ, ಗೋಲ್‌ಪಾರಾ, ನಾಗಾಂವ್, ಶಿವಸಾಗರ್, ತಿನ್‌ಸುಕಿಯಾ ಮತ್ತು ಗೋಲಾಘಾಟ್‌ನಲ್ಲಿ ಯೋಜನೆಯ 2 ನೇ ಹಂತದ ಅಡಿಯಲ್ಲಿ ನಿರ್ಮಿಸಲಾಗುವ ಹೊಸ ಕ್ಯಾನ್ಸರ್ ಆಸ್ಪತ್ರೆಗಳ ಶಂಕುಸ್ಥಾಪನೆ ಕೂಡಾ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!