ಸಿಲಿಕಾನ್‌ ಸಿಟಿಯಲ್ಲಿ ಮೋದಿ ಮತಬೇಟೆ: ರೋಡ್‌ ಶೋ ಹಿನ್ನೆಲೆ ಹಲವು ಮಾರ್ಗಗಳು ಬಂದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಇಂದು ಪ್ರಧಾನಿ ಮೋದಿ ರಾಜ್ಯಕ್ಕಾಗಮಿಸಲಿದ್ದಾರೆ. ಇಂದು ಸಂಜೆ ಪ್ರಧಾನಿ ಬೆಂಗಳೂರಿಗೆ ಆಗಮಿಸಲಿದ್ದು ನೈಸ್​ ರಸ್ತೆಯಿಂದ ಸುಮ್ಮನಹಳ್ಳಿ ಜಂಕ್ಷನ್​ವರೆಗೆ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ ನಗರದೆಲ್ಲೆಡೆ ಖಾಕಿ ಸರ್ಪಗಾವಲಿದ್ದು, ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಬ್ರೇಕ್‌ ಹಾಕಲಾಗಿದೆ.

2 ದಿನಗಳ ಕಾಲ ಮೋದಿ ರಾಜ್ಯ ಪ್ರವಾಸ ಮಾಡಲಿರುವುದರಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೋದಿ ಸಂಚರಿಸುವ ರಸ್ತೆಯುದ್ದಕ್ಕೂ 1 ಸಾವಿರ ಮನೆ ಮತ್ತು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ರೋಡ್​ ಶೋ ಭದ್ರತೆಗೆ 2,600 ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 6 ಡಿಸಿಪಿ, 18 ಎಸಿಪಿ, 120ಕ್ಕೂ ಹೆಚ್ಚು ಪಿಐ​​, 250 ಪಿಎಸ್​​ಐ, 2,600ಕ್ಕೂ ಹೆಚ್ಚು ಪಿಸಿಗಳು, ಕೆಎಸ್​ಆರ್​ಪಿ ಸಿಬ್ಬಂದಿ ಮೋದಿ ರೋಡ್​ಶೋ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ರೋಡ್ ​ಶೋಗಾಗಿ ಆ ಪ್ರದೇಶದ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗುತ್ತೆ. ಒಟ್ಟು 6 ಕಿ.ಮೀ. ರೋಡ್​ ಶೋ ನಡೆಯಲಿದ್ದು, 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆದಿದೆ.

ಎಲ್ಲೆಲ್ಲಿ ಸಂಚಾರ ನಿರ್ಬಂಧ

ಮಾಗಡಿ ರಸ್ತೆಯ ನೈಸ್​ ಜಂಕ್ಷನ್​ನಿಂದ ಸುಮನಹಳ್ಳಿ ಸರ್ಕಲ್​​ವರೆಗೂ ನರೇಂದ್ರ ಮೋದಿ ರೋಡ್​ ಶೋ ನಡೆಸಲಿದ್ದಾರೆ. ಹಾಗಾಗಿ ಇಂದು ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಓಲ್ಡ್ ಏರ್‌ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್‌ಸನ್ ರಸ್ತೆ, ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ.ಆರ್.ಸರ್ಕಲ್, ಆರ್.ವಿ.ಕಾಲೇಜ್ ರಸ್ತೆ, ಲಾಲ್‌ಬಾಗ್‌ ಮುಖ್ಯ ರಸ್ತೆ, ಬಸನವಗುಡಿ 50 ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬದಲಿ ಮಾರ್ಗಗಳು

  • ಮಾಗಡಿ-ಬೆಂಗಳೂರು ಸಂಚರಿಸುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.
  • ಮಾಗಡಿಯಿಂದ ತುಮಕೂರು ರಸ್ತೆಯತ್ತ ಸಾಗುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೊಂಡೇಕೊಪ್ಪ ನೆಲಮಂಗಲ ಮೂಲಕ ಸಂಚರಿಸಬಹುದು.
  • ತುಮಕೂರಿಂದ ನೈಸ್‌ ರಸ್ತೆ ಕಡೆ ಹೋಗುವವರು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ-ತಾವರೆಕೆರೆ – ಹೆಮ್ಮಿಗೆಪುರ-ಕೊಮ್ಮಘಟ್ಟ-ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
  • ಬೆಂಗಳೂರು -ಮಾಗಡಿರಸ್ತೆ ಕಡೆ ಓಡಾಡುವವರು ಎಂ.ಸಿ. ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ-ಕೆಂಗೇರಿ – ಕೊಮ್ಮಘಟ್ಟ – ಹೆಮ್ಮಿಗೆಪುರ – ತಾವರೆಕೆರೆ ಮೂಲಕ ಸಂಚರಿಸಬಹುದು.
  • ಇನ್ನು ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಹೋಗಲು ನಾಯಂಡಹಳ್ಳಿ ಜಂಕ್ಷನ್‌ ಮೂಲಕ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ ಆರ್ ಆರ್ ಕಾಲೇಜು ರಸ್ತೆ ಮೂಲಕ ತೆರಳಬೇಕು.
  • ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್, ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು.
  • ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗಲು ಗೊರಗುಂಟೆಪಾಳ್ಯ – ವೆಸ್ಟ್ ಆಫ್ ಕಾರ್ಡ್ ರಸ್ತೆ – ಎಂ.ಸಿ ಸರ್ಕಲ್ – ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!