November 8, 2026
Sunday, November 8, 2026
spot_img

ರಣಬೀರ್‌ಗೆ ಡ್ಯೂಪ್ ಹಾಕಿದ ಹಾಲಿವುಡ್ ಸ್ಟಂಟ್ ಮ್ಯಾನ್: ‘ರಾಮಾಯಣ’ ಬಿಟಿಎಸ್ ಚಿತ್ರಗಳು ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತ್ಯೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಾಮಾಯಣ’ ಸಿನಿಮಾದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಈ ದೃಶ್ಯಕಾವ್ಯದ ಶೂಟಿಂಗ್ ಸೆಟ್‌ನಿಂದ ಮತ್ತೊಂದು ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಸಾಹಸ ದೃಶ್ಯಗಳಲ್ಲಿ ಬಾಡಿ ಡಬಲ್ ಆಗಿ ಕಾರ್ಯನಿರ್ವಹಿಸಿದ ಪ್ರಸಿದ್ಧ ಸ್ಟಂಟ್ ಪರ್ಫಾರ್ಮರ್ ಲ್ಯೂಕ್ ಇಯೊನೊ, ಚಿತ್ರೀಕರಣದ ಅಪರೂಪದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶೂಟಿಂಗ್ ಸಮಯದ ಫೋಟೋಗಳನ್ನು ಹಂಚಿಕೊಂಡಿರುವ ಲ್ಯೂಕ್, ರಾಮಾಯಣದಂತಹ ಮಹಾನ್ ಕಥೆಯ ಭಾಗವಾಗಿದ್ದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ ಪ್ರಮುಖ ಹಾಗೂ ಪವಿತ್ರ ಕಥೆಯನ್ನು ಬೆಳ್ಳಿಪರದೆಯ ಮೇಲೆ ತರುವಂತಹ ಬೃಹತ್ ಯೋಜನೆಗೆ ರಣಬೀರ್ ಕಪೂರ್ ಅವರ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದು ನನ್ನ ಭಾಗ್ಯ. ರಣಬೀರ್ ನಾನು ಕೆಲಸ ಮಾಡಿದ ಅತ್ಯುತ್ತಮ ನಟರಲ್ಲಿ ಒಬ್ಬರು,” ಎಂದು ಕೊಂಡಾಡಿದ್ದಾರೆ. ಅಲ್ಲದೆ ತಮ್ಮ ಈ ಅವಕಾಶಕ್ಕಾಗಿ ಜಿ-ಸ್ಟಂಟ್ ಅಲಯನ್ಸ್ ಗ್ರೂಪ್, ಐಯಾನ್ ವ್ಯಾನ್ ಟೆಂಪರ್ಲಿ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

https://www.instagram.com/p/Dfae7lokdK3/?utm_source=ig_web_button_share_sheet

ಲ್ಯೂಕ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಸಿನಿಮಾದ ಅದ್ಧೂರಿ ಮೇಕಿಂಗ್‌ನ ನೋಟ ಸಿಗುತ್ತದೆ. ಒಂದು ಫೋಟೋದಲ್ಲಿ ರಣಬೀರ್ ಕಪೂರ್ ಜೊತೆಗೆ ಸಾಂಪ್ರದಾಯಿಕ ಉಡುಪು, ರುದ್ರಾಕ್ಷಿ ಮಾಲೆ ಮತ್ತು ಕೇಶವಿನ್ಯಾಸದೊಂದಿಗೆ ಕಲಾವಿದ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಧೋತಿ, ಚರ್ಮದಂತಹ ಎದೆಯ ಕವಚ ಮತ್ತು ಕೃತಕ ಬಂಡೆಗಳ ಹಿನ್ನೆಲೆ ಹೊಂದಿರುವ ಭವ್ಯ ಸೆಟ್‌ಗಳು ಗಮನಸೆಳೆಯುತ್ತವೆ.

ಇನ್ನು ಸಾಹಸ ದೃಶ್ಯಗಳ ತಾಂತ್ರಿಕತೆ ಬೆರಗುಗೊಳಿಸುವಂತಿದೆ. ಬ್ಲೂ ಸ್ಕ್ರೀನ್ ಹಿನ್ನೆಲೆಯಲ್ಲಿ ದೊಡ್ಡ ಯಾಂತ್ರಿಕ ರೋಬೋಟಿಕ್ ರಚನೆಯ ಮೇಲೆ ಹಾರುವ ಜೀವಿಯ ಮೇಲೆ ಕುಳಿತಂತೆ ಸಾಹಸಿ ಕಲಾವಿದ ನಿಂತಿರುವುದು ಹಾಗೂ ಬೃಹತ್ ಕ್ರೇನ್ ಕ್ಯಾಮೆರಾಗಳನ್ನು ಬಳಸುತ್ತಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಒಟ್ಟಿನಲ್ಲಿ ಹಾಲಿವುಡ್ ಮಟ್ಟದ ತಾಂತ್ರಿಕತೆ ಹಾಗೂ ತಂತ್ರಜ್ಞರನ್ನು ಬಳಸಿಕೊಂಡು ಮೂಡಿಬಂದಿರುವ ಈ ‘ರಾಮಾಯಣ’, ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.

Must Read

Skip to toolbar