June 4, 2026
Thursday, June 4, 2026
spot_img

ಕಚ್ಚಾ ತೈಲ ಆಮದಿಗೆ ಮೋದಿ ಮಾಸ್ಟರ್ ಪ್ಲಾನ್: ವೆನೆಜುವೆಲಾ ಜೊತೆ ಭಾರತದ ಬೃಹತ್ ಇಂಧನ ಒಪ್ಪಂದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ವೆನೆಜುವೆಲಾ ದೇಶಗಳ ನಡುವಿನ ದ್ವಿಪಕ್ಷೀಯ ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜಧಾನಿ ನವದೆಹಲಿಯಲ್ಲಿ ಇಂದು ಅತ್ಯಂತ ಪ್ರಮುಖ ರಾಜತಾಂತ್ರಿಕ ಸಭೆ ಜರುಗಿತು.

ನವದೆಹಲಿಯ ಪ್ರಸಿದ್ಧ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಉಭಯ ದೇಶಗಳ ಕಾರ್ಯತಂತ್ರದ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಇಂಧನ ಭದ್ರತೆಗೆ ಭಾರತದ ಆದ್ಯತೆ:

ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ, ಭಾರತವು ತನ್ನ ಕಚ್ಚಾ ತೈಲ ಆಮದನ್ನು ವೈವಿಧ್ಯಗೊಳಿಸಲು ಗಂಭೀರ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಇಂಧನ ವಲಯದ ಸಹಕಾರವೇ ಇಂದಿನ ಸಭೆಯ ಪ್ರಮುಖ ಜಾಗತಿಕ ಆದ್ಯತೆಯಾಗಿತ್ತು. ಕೇವಲ ತೈಲ ಮತ್ತು ಗ್ಯಾಸ್ ಕ್ಷೇತ್ರ ಮಾತ್ರವಲ್ಲದೆ, ಆರೋಗ್ಯ, ಫಾರ್ಮಾಸ್ಯುಟಿಕಲ್ಸ್ (ಔಷಧ ವಲಯ), ಸಾರಿಗೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿಯೂ ಪರಸ್ಪರ ಸಹಭಾಗಿತ್ವವನ್ನು ವಿಸ್ತರಿಸಲು ಉಭಯ ನಾಯಕರು ಸಮ್ಮತಿ ಸೂಚಿಸಿದರು.

ಐದು ದಿನಗಳ ಭಾರತ ಪ್ರವಾಸ:

ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಪ್ರಸ್ತುತ ಭಾರತಕ್ಕೆ 5 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಅವರೊಂದಿಗೆ ವೆನೆಜುವೆಲಾದ ವಿದೇಶಾಂಗ, ಆರ್ಥಿಕತೆ ಮತ್ತು ತಂತ್ರಜ್ಞಾನ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಪ್ರಮುಖ ನಿಯೋಗವೂ ಆಗಮಿಸಿದೆ. ಭಾರತ ಮತ್ತು ವೆನೆಜುವೆಲಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ಮುಂದಿನ ದಿನಗಳಲ್ಲಿ ಶರವೇಗದಲ್ಲಿ ಬೆಳವಣಿಗೆಯತ್ತ ಕೊಂಡೊಯ್ಯಲು ಈ ಸಭೆಯು ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !