ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮೀರಿಸುವವರಿಲ್ಲ, ಇಡೀ ವಿಶ್ವದಲ್ಲಿ ಪ್ರಧಾನಿಯೇ ನಂಬರ್ 1..
ಹೌದು, ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯೇ ಅತ್ಯಂತ ಜನಪ್ರಿಯ ನಾಯಕ ಎಂದು ಹೇಳಲಾಗಿದೆ.
ಒಟ್ಟಾರೆ ಶೇ.76ರಷ್ಟು ಮತಗಳನ್ನು ಪಡೆಯುವ ಮೂಲಕ ವಿಶ್ವ ನಾಯಕರಲ್ಲಿ ಪ್ರಧಾನಿ ಅಗ್ತಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ಅಮೆರಿಕ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ಪ್ರಕಾರ ಶೇ.76ರಷ್ಟು ಜನರು ಪ್ರಧಾನಿ ಮೋದಿಯ ಜನಪ್ರಿಯತೆಯನ್ನು ಒಪ್ಪಿಕೊಂಡಿದ್ದಾರೆ. ಶೇ.18ರಷ್ಟು ಮಂದಿ ಒಪ್ಪಿಕೊಂಡಿಲ್ಲ ಹಾಗೂ ಶೇ.6ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಛಿಸಿಲ್ಲ.
ಎರಡನೇ ಅತ್ಯುತ್ತಮ ಅನುಮೋದನೆಯ ರೇಟಿಂಗ್ ಪಡೆದುಕೊಂಡಿರುವುದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯಲ್ ಲೋಪೆಝ್ ಒಬ್ರಡಾರ್. ಶೇ.66ರಷ್ಟು ಮಂದಿ ಇವರನ್ನು ಇಷ್ಟಪಟ್ಟಿದ್ದಾರೆ. ಶೇ.58ರಷ್ಟು ಮಂದಿಯ ಅನುಮೋದನೆಯಿಂದ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಮೂರನೇ ಸ್ಥಾನದಲ್ಲಿದ್ದಾರೆ.
ಹಿಂದಿನ ಜಾಗತಿಕ ರೇಟಿಂಗ್ನಲ್ಲಿಯೂ ಪ್ರಧಾನಿ ಮೋದಿ ಮೊದಲನೇ ಸ್ಥಾನದಲ್ಲಿಯೇ ಇದ್ದರು. ಈಗಲೂ ಕೂಡ ಮೊದಲನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.