ಬಳ್ಳಾರಿಯಲ್ಲಿ ಬಜರಂಗಿ ಪ್ರಸ್ತಾವದಿಂದಲೇ ಶುರುವಾಯ್ತು ಮೋದಿ ಭಾಷಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಜರಂಗದಳವನ್ನು ನಿಷೇಧಿತ ಉಗ್ರವಾದಿ ಸಂಘಟನೆ ಪಿಎಫ್ಐ ಜತೆ ಸಮೀಕರಿಸುವುದಕ್ಕೆ ಹೋಗಿ ಕರ್ನಾಟಕದ ಕಾಂಗ್ರೆಸ್ ಹಿಂದುಗಳ ಆಕ್ರೋಶವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರದ ಬಳ್ಳಾರಿ ಪ್ರಚಾರಾಂದೋಲನವು ಬಜರಂಗಿ-ಆಂಜನೇಯರ ಪ್ರಸ್ತಾವವನ್ನೇ ಪ್ರಾರಂಭದಲ್ಲಿ ಹೊಂದಿದ್ದು ಮತ್ತು ಆ ಮೂಲಕ ಜನರಲ್ಲಿ ಉತ್ಸಾಹ ಏರುವಂತೆ ಮಾಡಿದ್ದು ವಿಶೇಷವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಬಳ್ಳಾರಿಯಲ್ಲಿ ತಮ್ಮ ಭಾಷಣವನ್ನು ಎಂದಿನಂತೆ ಭಾರತ್ ಮಾತಾ ಕೀ ಜೈ ಎಂದು ಸಭಿಕರೊಂದಿಗೆ ಘೋಷ ಮೊಳಗಿಸುವುದರಲ್ಲಿ ಶುರು ಮಾಡಿದರು. ಆ ಘೋಷಣೆಯ ನಂತರ ಅವರು ಮೊಳಗಿಸಿದ್ದೆ ಬಜರಂಗ ಬಲಿ ಕೀ.. ಎಂಬ ಉದ್ಘೋಷ. ಇದಕ್ಕೆ ನೆರೆದಿದ್ದ ಜನರೂ ಉತ್ಸಾಹದಿಂದ ಜೈಕಾರ ಹಾಕಿದರು.

ಈ ಹಿಂದಿನ ಮುಲ್ಕಿ ಮತ್ತಿತರ ಭಾಷಣಗಳಲ್ಲೂ ಬಜರಂಗ ಬಲಿಯ ಕುರಿತು ಮೋದಿ ಉದ್ಘೋಷ ಹಾಕಿಸಿದ್ದರು. ಆದರೆ ಬಳ್ಳಾರಿ ನೆಲದಲ್ಲಿ ಇದಕ್ಕೂ ಮೀರಿ ಹನುಮನನ್ನು ವಿವರವಾಗಿ ತಮ್ಮ ಭಾಷಣದ ಪ್ರಾರಂಭದಲ್ಲಿ ತಂದರು. “ಇದು ಆಂಜನೇಯ ಸ್ವಾಮಿಯ ನೆಲ. ಇಲ್ಲಿ ಆಂಜನೇಯನು ಹುಲಿಕುಂಟೆ ಸ್ವಾಮಿಯ ರೂಪದಲ್ಲಿ ಇದ್ದಾನೆ. ಆತನಿಗೆ ಶಿರಬಾಗಿ ನಮನ” ಎಂದು ಸ್ಥಳೀಯ ಇತಿಹಾಸಕ್ಕೆ ಮೆರಗು ನೀಡುವಂತೆ ಮಾತು ಪ್ರಾರಂಭಿಸಿದಾಗ ಅಲ್ಲಿ ನೆರೆದಿದ್ದವರ ಪ್ರತಿಸ್ಪಂದನೆಯೂ ದೊಡ್ಡ ಮಟ್ಟದಲ್ಲೇ ವ್ಯಕ್ತವಾಯಿತು.

ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಯ ಜತೆಗಿದೆ ಎಚ್ಚರ ಎಂಬ ಸಂದೇಶವನ್ನೂ ಜನರ ನಡುವೆ ತಮ್ಮ ಭಾಷಣದಲ್ಲಿ ಭಿತ್ತರಿಸಿದರು ಪ್ರಧಾನಿ ಮೋದಿ. ಇದೀಗ ಬಿಡುಗಡೆಯಾಗಿರುವ ‘ದ ಕೇರಳ ಸ್ಟೋರಿ’ ಎಂಬ ಚಿತ್ರವನ್ನು ಕಾಂಗ್ರೆಸ್ ವಿರೋಧಿಸಿದ್ದೇಕೆ ಎಂದವರು ಪ್ರಶ್ನಿಸಿದರು. ‘ಕೇರಳದಂಥ ಶಾಂತ-ಪ್ರತಿಭಾವಂತರ ನಾಡಿನಲ್ಲಿ ಉಗ್ರ ಸಂಘಟನೆಯೊಂದು ಹೇಗೆ ವಿಧ್ವಂಸ ಸೃಷ್ಟಿಸುತ್ತದೆ ಎಂಬ ಕತೆಯನ್ನು ಸಿನಿಮಾ ಹೊಂದಿದೆ. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಉಗ್ರವಾದಿಗಳ ಜತೆ ನಿಂತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!