ಮೋಯಿನ್‌ ಅಲಿ ಅಬ್ಬರಕ್ಕೆ ಬೆಚ್ಚಿದ ಸೌತ್‌ ಆಫ್ರಿಕಾ: ಇಂಗ್ಲೆಂಡ್ ಪರ ಅತಿವೇಗದ ಅರ್ಧಶತಕ ಸಿಡಿಸಿದ ಚೆನ್ನೈ ಆಲ್ರೌಂಡರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಆಲ್‌ರೌಂಡರ್ ಮೊಯಿನ್ ಅಲಿ, ಜಾನಿ ಬೈರ್‌ ಸ್ಟೋ ಅಬ್ಬರದ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡವು ಬ್ರಿಸ್ಟಾಲ್‌ ನ ಕಂಟ್ರಿ ಗ್ರೌಂಡ್‌ ನಲ್ಲಿ ನಡೆದ ಪ್ರಥಮ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 41 ರನ್‌ ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಆರಂಭಕರಾದ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಕಡಿಮೆ ಮೊತ್ತಕ್ಕೆ ಔಟಾದರು .ಆದರೆ ಆ ಬಳಿಕ ಕಣಕ್ಕಿಳಿದ ಡೇವಿಡ್ ಮಲಾನ್ (23 ಎಸೆತಗಳಲ್ಲಿ 43), ಜಾನಿ ಬೈರ್‌ಸ್ಟೋವ್ (53 ಎಸೆತಗಳಲ್ಲಿ 90) ಅಬ್ಬರಿಸಿದರು. ಆ ಬಳಿಕ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೋಯಿನ್‌ ಅಲಿ ಆರ್ಭಟಕ್ಕೆ ಸೌತ್‌ ಆಫ್ರಿಕಾ ಬೌಲರ್‌ ಗಳು ಅಕ್ಷರಶಃ ಬೆಚ್ಚಿದರು. ಅಲಿ ಕೇವಲ 18 ಎಸೆತಗಳಲ್ಲಿ 52 ರನ್ ಸಿಡಿಸುವ ಮೂಲಕ ಇಂಗೆಂಡ್‌ ಪರವಾಗಿ ಟಿ20 ಕ್ರಿಕೆಟ್‌ ನಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ ಮನ್‌ ಎಂಬ ದಾಖಲೆ ಬರೆದರು. ಅಲ್ಲದೆ ಅಂತಾರಾಷ್ಟ್ರೀಯ ಟಿ20ಯಲ್ಲಿ 6ನೇ ಫಾಸ್ಟೆಸ್ಟ್‌ ಹಾಫ್‌ ಸೆಂಚುರಿ ಸಿಡಿಸಿದ ಖ್ಯಾತಿಗೆ ಪಾತ್ರರಾದರು.
ಮೋಯಿನ್‌ ಅಬ್ಬರದ ಬಲದಿಂದ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 234 ರನ್ ಗಳ ಬೃಹತ್‌ ಮೊತ್ತ ಕಲೆಹಾಕಿತು. ಆಫ್ರಿಕಾ ಪರ ಲುಂಗಿ ಎನ್‌ ಗಿಡಿ 5 ವಿಕೆಟ್‌ ಪಡೆದ ಸಾಧನೆ ಮಾಡಿದರು.
ದೊಡ್ಡ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರೀಜಾ ಹೆಂಡ್ರಿಕ್ಸ್ (33 ಎಸೆತಗಳಲ್ಲಿ 57) ಮತ್ತು ಟ್ರಿಸ್ಟಾನ್ ಸ್ಟಬ್ಸ್ (28 ಎಸೆತಗಳಲ್ಲಿ 72) ಒಂದು ಹಂತದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಸೌತ್‌ ಆಪ್ರಿಕಾ 20 ಓವರ್‌ಗಳಲ್ಲಿ 193 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!