ʼಮಾಧವ ಪುರʼವಾದ ಮೊಹಮದ್‌ ಪುರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಘಲರ ಕಾಲದ ಗುಲಾಮಗಿರಿಯ ಸಂಕೇತವಿರುವ ಹೆಸರನ್ನು ತೆಗೆದುಹಾಕುವ ಮೂಲಕ ದಕ್ಷಿಣ ದೆಹಲಿಯ ಊರೊಂದರ ಹೆಸರನ್ನು ಬದಲಾವಣೆ ಮಾಡಲಾಗಿದೆ. ಸ್ಥಳೀಯ ನಾಯಕರು ಮತ್ತು ಬಿಜೆಪಿ ಸೇರಿ ʼಮೊಹಮದ್‌ ಪುರʼ ಎಂಬ ಹೆಸರನ್ನು ಬದಲಾಯಿಸಿ ʼಮಾಧವಪುರʼ ಎಂದು ಮರುನಾಮಕರಣ ಮಾಡಿದ್ದಾರೆ. ಆದರೆ, ಇದನ್ನು ಅಧಿಕೃತವಾಗಿಸುವ ಅಧಿಕಾರವಿರುವುದು ದೇಹಲಿಯ ಆಪ್ ಸರ್ಕಾರಕ್ಕೆ ಮಾತ್ರ.

ಈ ಕುರಿತು ಬಿಜೆಪಿ ನಾಯಕ ಆದೇಶ್‌ ಗುಪ್ತಾ “ದೆಹಲಿಯ ಜನರು ಗುಲಾಮಗಿರಿಯನ್ನು ನೆನಪಿಸುವ ಹೆಸರನ್ನು ಇಷ್ಟಪಡದೇ ಬದಲಾಯಿಸಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ಮತ್ತು ಸ್ಥಳೀಯ ನಾಯಕರು ಈ ಸೇರಿ ಈ ಕೆಲಸವನ್ನು ಮಾಡುವುದರೊಂದಿಗೆ ಮೊಘಲರ ದಬ್ಬಾಳಿಕೆಯನ್ನು ನೆನಪಿಸುವ ಹೆಸರನ್ನು ತೆಗೆದು ಹಾಕಿದ್ದಾರೆ. ಅದರೆ ಸರ್ಕಾರವು ಇದಕ್ಕೆ “ಅನುಮೋದನೆ ನೀಡದೇ ಇರುವುದರಿಂದ ಈ ಹೆಸರು ಅಸಿಂಧು”ಎಂದಿದೆ.

ದಕ್ಷಿಣ ನಗರಸಭೆಯಯ ಹಿರಿಯ ಅಧಿಕಾರಿಗಳ ಪ್ರಕಾರ, “ಈ ಸಂಬಂಧ ನಿರ್ಣಯವನ್ನು ಸದನವು ಅಂಗೀಕರಿಸಿದೆ. ಪ್ರಸ್ತಾವನೆಯನ್ನು ದೆಹಲಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ ಮತ್ತು ಅವರ ನಿರ್ಧಾರವನ್ನು ನಿರೀಕ್ಷಿಸಲಾಗಿದೆ” ಎಂದಿದ್ಧಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ “ಪ್ರಸ್ತಾವನೆಯು 2019 ರಲ್ಲೇ ಅಂಗೀಕಾರವಾಗಿತ್ತು. ಆದರೆ ಅಧಿಕಾರಿಗಳು ಇನ್ನೂ ಬದಲಾಯಿಸಿರಲಿಲ್ಲ. ಪ್ರಸ್ತುತ ಜನರೇ ಅದನ್ನು ಬದಲಾಯಿಸಿದ್ದಾರೆ. ಮೊಘಲರ ಕಾಲದಲ್ಲಿ ಈ ಗ್ರಾಮಗಳ ಹೆಸರುಗಳನ್ನು ಬಲವಂತವಾಗಿ ಬದಲಾಯಿಸಲಾಗಿತ್ತು, ಆದರೆ ಈಗಲೂ ಬದಲಾಗದ ಹೆಸರಿನಲ್ಲಿರುವ ಮೊಘಲರ ದಬ್ಬಾಳಿಕೆಯನ್ನು ಇಷ್ಟಪಡದೇ ಜನರೇ ಬದಲಾಯಿಸಿದ್ದಾರೆ ” ಎಂದಿದ್ಧಾರೆ.

ಇನ್ನು ಮುಂಬರುವ ದಿನಗಳಲ್ಲಿ ಗುಲಾಮಗಿರಿಯನ್ನು ಸೂಚಿಸುವ ಹೆಸರಿರುವ ಇನ್ನೂ 40 ಪ್ರದೇಶಗಳನ್ನು ಮರುನಾಮಕರಣ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!