ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೇಮಿಸಿದ ಆಂತರಿಕ ಸಮಿತಿಯ ಮೂವರು ಸದಸ್ಯರು ಮಂಗಳವಾರ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಸಮಿತಿಯ ಸದಸ್ಯರು ರಾಜಧಾನಿಯ 30, ತುಘಲಕ್ ಕ್ರೆಸೆಂಟ್ ನಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಮಿತಿಯ ಸದಸ್ಯರು ವರ್ಮಾ ಅವರ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಇದ್ದರು ಮತ್ತು ಸುಟ್ಟಿರುವ ನಗದು ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದರು.
ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ಬಗ್ಗೆ ಆಂತರಿಕ ತನಿಖೆ ನಡೆಸಲು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಾರ್ಚ್ 22 ರಂದು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಮಾರ್ಚ್ 14 ರ ರಾತ್ರಿ 11.35 ರ ಸುಮಾರಿಗೆ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು. ಅದೇ ಸಮಯದಲ್ಲಿ ವರ್ಮಾ ನಿವಾಸದಲ್ಲಿ ನಗದು ಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ.
ನ್ಯಾಯಮೂರ್ತಿ ವರ್ಮಾ 2021ರಲ್ಲಿ ಅಲಹಾಬಾದ್ ಹೈಕೋರ್ಟ್ನಿಂದ ದೆಹಲಿ ಹೈಕೋರ್ಟ್ಗೆ ವರ್ಗಾವಣೆಯಾಗಿದ್ದರು. ಪ್ರಸ್ತುತ ಅವರನ್ನು ಮತ್ತೆ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸುವಂತೆ ಸಿಜೆಐ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.