ಹೊಸದಿಗಂತ ಡಿಜಿಟಲ್ ಡೆಸ್ಕ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಆಪ್ತರಲ್ಲಿ ಒಬ್ಬರಾದ ಸಂಜಯ್ ರಾವುತ್ ಅವರಿಗೆ ವಿಶೇಷ ನ್ಯಾಯಾಲಯವು ಇಂದು ಜಾಮೀನು ಮಂಜೂರು ಮಾಡಿದೆ.
ರಾಜ್ಯಸಭಾ ಸದಸ್ಯ ಹಾಗೂ ಠಾಕ್ರೆ ಬಣದ ʼಫೈರ್‌ಬ್ರಾಂಡ್ʼ ರಾವುತ್ ಕಳೆದ ಮೂರೂವರೆ ತಿಂಗಳಿನಿಂದ ಜೈಲಿನಲ್ಲಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 21 ರಂದು ಕಾಯ್ದಿರಿಸಿತ್ತು.
ಮುಂಬೈನ ವಸತಿ ಕಾಲೋನಿಯೊಂದರ ಪುನರಾಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯವು ಕಸ್ಟಡಿಗೆ ತೆಗೆದುಕೊಂಡಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಬಂಧಿಸುವ ಮೊದಲು, ರಾಜ್ಯಸಭಾ ಸಂಸದ ಎರಡು ಬಾರಿ ಏಜೆನ್ಸಿಯ ಸಮನ್ಸ್‌ನಿಂದ ಹೊರಗುಳಿದಿದ್ದರು. ರಾಜಕೀಯ ದ್ವೇಷದಿಂದ ತಮ್ಮ ವಿರುದ್ಧ ಸುಳ್ಳು ಪ್ರಕರಣವನ್ನು ಸಿದ್ಧಪಡಿಸಲಾಗಿದೆ ಎಂದು ರಾವತ್ ಆರೋಪಿಸಿದ್ದರು.
ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಗಳ ನಡುವೆ ಶಿವಸೇನೆಯ ನಿಯಂತ್ರಣಕ್ಕಾಗಿ ತೀವ್ರ ಜಟಾಪಟಿ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯಸಭಾ ಸಂಸದರ ಬಂಧನವಾಗಿತ್ತು. ರಾವುತ್ ಅವರು ಠಾಕ್ರೆ ಶಿಬಿರದ ಧ್ವನಿಯಾಗಿದ್ದರು. ಶಿವಸೇನೆಯೊಳಗಿನ ಬಂಡಾಯವು ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ನಂತರ ಶಿಂಧೆ ಪಾಳಯವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ರಾವುತ್ ಧ್ವನಿ ಎತ್ತಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ