ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (JKCA)ಯಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯ (ED) ನೊಟೀಸ್ ಜಾರಿ ಮಾಡಿದೆ.
ಶ್ರೀನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿ ಎದುರು ಮಂಗಳವಾರ ಹಾಜರಾಗುವಂತೆ ಸೂಚಿಸಲಾಗಿದೆ.
ಜ. 11ರಂದು ಹಾಜರಾಗುವಂತೆ 86 ವರ್ಷದ ಅಬ್ದುಲ್ಲಾ ಅವರಿಗೆ ED ಈ ಮೊದಲು ಸೂಚಿಸಿತ್ತು. ಆದರೆ ಅವರು ಹಾಜರಾಗಿರಲಿಲ್ಲ.
2018ರ ಈ ಪ್ರಕರಣ ಕುರಿತು ಸಿಬಿಐ ಮೊದಲು ಆರೋಪ ಪಟ್ಟಿ ಸಲ್ಲಿಸಿತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ.
ಈ ಪ್ರಕರಣದಲ್ಲಿ 2022ರಲ್ಲಿ ಜಾರಿ ನಿರ್ದೇಶನಾಲಯವು ಆರೋಪ ಪಟ್ಟಿ ಸಲ್ಲಿಸಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಹಾಗೂ ಅದನ್ನು ಬ್ಯಾಂಕ್‌ನಿಂದ ನಗದು ರೂಪದಲ್ಲಿ ಪಡೆದ ಪ್ರಕರಣ ಕುರಿತು ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.