ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಬಳಿಕ ಇದೀಗ ವಿಶ್ವಕ್ಕೆ ಮಂಕಿ ಪಾಕ್ಸ್ ಭಯ ಕಾಡಲಾರಂಭಿಸಿದ್ದು, ಮತ್ತೊಂದು ಲಾಕ್ ಡೌನ್ ಸಾಧ್ಯತೆಯ ಆತಂಕ ಎದುರಾಗಿದೆ.
ಆಫ್ರಿಕನ್ ರಾಷ್ಟ್ರಗಳ ಮೂಲಕ ಈ ರೋಗವು ವೇಗವಾಗಿ ಹರಡುತ್ತಿದ್ದು, ಆತಂಕ ಎದುರಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ವಿಧಿಸಲಾದ ಜಾಗತಿಕ ಲಾಕ್‌ಡೌನ್‌ಗಳು ಮತ್ತೆ ಉಂಟಾಗಬಹುದೇ ಎನ್ನುವ ಭಯವೂ ಕಾಡುತ್ತಿದೆ. ಈ ಮಧ್ಯೆ ಎಲ್ಲರೂ ಕೊಂಚ ನೆಮ್ಮದಿಯ ವಿಚಾರವೇನೆಂದರೆ ವಿಶ್ವಸಂಸ್ಥೆಯ ತಜ್ಞ ಡಾ. ಹ್ಯಾನ್ಸ್ ಕ್ಲೂ ಅವರು ಎಂ ಪಾಕ್ಸ್ ಗಂಭೀರವಾಗಿದ್ದರೂ ಕೋವಿಡ್ -19 ನಂತಹ ಕಠಿಣ ಕ್ರಮ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಎಂಪಾಕ್ಸ್ ನ ಹೊಸ ರೂಪಾಂತರವಾದ ಕ್ಲೇಡ್ ಐಬಿ ಬಗ್ಗೆ ಹೆಚ್ಚುತ್ತಿರುವ ಆತಂಕಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶೇ. 10-11ರಷ್ಟು ಹೆಚ್ಚಿನ ಮರಣ ಪ್ರಮಾಣದಿಂದಾಗಿ ಈ ತಳಿಯು ಆತಂಕವನ್ನು ಹೆಚ್ಚಿಸಿದೆ. ಆದರೆ ರೂಪಾಂತರದ ತೀವ್ರತೆಯ ಹೊರತಾಗಿಯೂ ಜಾಗತಿಕ ಸಮುದಾಯವು ಅದರ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಉಪಕರಣಗಳು ಮತ್ತು ಜ್ಞಾನವನ್ನು ಹೊಂದಿದೆ ಎಂದು ಡಾ. ಕ್ಲೂ ಹೇಳಿದ್ದಾರೆ.
ಎಂಪಾಕ್ಸ್‌ಗೆ ಸಂಬಂಧಿಸಿ ಲಾಕ್‌ಡೌನ್ ಬಗ್ಗೆ ಪ್ರಸ್ತುತ ಯಾವುದೇ ಯೋಜನೆಗಳಿಲ್ಲ. ಯಾಕೆಂದರೆ ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ತಂತ್ರಗಳೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು. 2022ರಲ್ಲಿ ಮಂಕಿ ಪಾಕ್ಸ್ ಮೊದಲ ಬಾರಿಗೆ ಲಂಡನ್‌ನಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯಿಂದ ಸುಮಾರು 450 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಇದರ ಸಂಭಾವ್ಯ ಅಪಾಯದ ಆತಂಕ ಹೆಚ್ಚಾಗಿದೆ.
ವೇಗವಾಗಿ ಹರಡುವಿಕೆ ಮತ್ತು ಸೋಂಕಿತರ ಮೇಲೆ ತೀವ್ರ ಪರಿಣಾಮದಿಂದಾಗಿ ವಿಶ್ವ ಅರೋಗ್ಯ ಸಂಸ್ಥೆಯು ಮಂಕಿ ಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.
ಮಂಕಿ ಪಾಕ್ಸ್ ವೈರಸ್‌ನ ಲಕ್ಷಣಗಳು ಸಾಮಾನ್ಯವಾಗಿ 3ರಿಂದ 17 ದಿನಗಳ ಅನಂತರ ಕಾಣಿಸಿಕೊಳ್ಳುತ್ತವೆ. ಜ್ವರ, ಚರ್ಮದ ದದ್ದುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಆಯಾಸ ಸಾಮಾನ್ಯವಾಗಿ ರೋಗ ಲಕ್ಷಣಗಳಾಗಿರುತ್ತವೆ. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವವರಿಗೆ ಈ ರೋಗವು ವೇಗವಾಗಿ ಹರಡುವ ಅಪಾಯವಿದೆ.
ಸಲಿಂಗಕಾಮಿ ಪುರುಷರು ಮತ್ತು ಲೈಂಗಿಕ ಕಾರ್ಯಕರ್ತರ ಮೇಲೆ ಮಂಕಿ ಪಾಕ್ಸ್ ಹೆಚ್ಚಾಗಿ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ.
ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದರೂ ಡಾ. ಕ್ಲೂ ಅವರ ಹೇಳಿಕೆಗಳು ಕೊಂಚ ಆತಂಕವನ್ನು ಕಡಿಮೆ ಮಾಡಿ ಆಶಾವಾದವನ್ನು ಮೂಡಿಸುತ್ತದೆ. ಎಚ್ಚರಿಕೆಯಿಂದ ಇರುವುದು, ಪರಿಣಾಮಕಾರಿ ಕ್ರಮಗಳನ್ನು ಪಾಲಿಸುವುದರಿಂದ ಜಗತ್ತು ಮತ್ತೊಂದು ಲಾಕ್‌ಡೌನ್ ಸನ್ನಿವೇಶವನ್ನು ಎದುರಿಸುವ ತೊಂದರೆಯಿಂದ ಪಾರಾಗಬಹುದು.