ಹೊಸದಿಗಂತ ವರದಿ, ಬಂಟ್ವಾಳ :
ಬೈಕ್ ಮಾರಾಟದ ಅಂಗಡಿಯಿಂದ ಟ್ರಯಲ್ ನೋಡುವುದಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗಿ ವಾಪಾಸು ನೀಡದೆ ಪರಾರಿಯಾದ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುದು ಗ್ರಾಮದ ನಿವಾಸಿ ಮಹಮ್ಮದ್ ಶಮೀರ್ ಬಿನ್ ಉಮರಬ್ಬ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮೆಲ್ಕಾರ್-ಪಾಣೆಮಂಗಳೂರಿನಲ್ಲಿ ಬೈಕ್ ಪಾಯಿಂಟ್ ಎಂಬ ಹೆಸರಿನ ಅಂಗಡಿ ಹೊಂದಿದ್ದು, ಸುಮಾರು 2 ವರ್ಷಗಳಿಂದ ಬೇರೆಯವರಿಂದ ವಾಹನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ.
ಇವರು 2 ತಿಂಗಳ ಹಿಂದೆ ಕೆಎ70 ಇ9510 ನೋಂದಣಿ ಸಂಖ್ಯೆಯ ಟಿವಿಎಸ್125 ದ್ವಿಚಕ್ರ ವಾಹನವನ್ನು ಅದರ ನೋಂದಣಿ ಮಾಲಕರಿಂದ ಖರೀದಿಸಿ, ಮಾರಾಟಕ್ಕೆ ತನ್ನ ಅಂಗಡಿಯಲ್ಲಿ ಇಟ್ಟಿದ್ದರು. ಆಗಸ್ಟ್ 13 ರಂದು ಸಂಜೆ ಅಂಗಡಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊರ್ವ ಈ ಟಿವಿಎಸ್125 ವಾಹನವನ್ನು ಖರೀದಿಸುವುದಾಗಿ ಹೇಳಿ, ಟ್ರಯಲ್ ನೋಡಿ ಬರುವುದಾಗಿ ನಂಬಿಸಿ ದ್ವಿಚಕ್ರ ವಾಹನ ಪಡೆದುಕೊಂಡು ಟ್ರಯಲ್ ನೋಡಲು ಹೋದವರು ಈವರೆಗೆ ಹಿಂತಿರುಗಿಸದೇ ವಂಚಿಸಿಲಾಗಿದೆ ಎಂದು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.