ಹೊಸದಿಗಂತ ವರದಿ, ರಾಯಚೂರು :
ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಮುಂಗಾರು ಬೆಳೆ ಹಾನಿಗೊಳಗಾಗಿದೆ. ಭತ್ತ ಬೆಳೆಯುವ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದ ಆರ್‌ಎನ್‌ಆರ್ ತಳಿಯ ಭತ್ತ ಬಹುತೇಕ ನೆಲಕ್ಕುರುಳುವ ಮೂಲಕ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಬುಧವಾರ ಜಿಲ್ಲೆಯ ರಾಯಚೂರು ತಾಲೂಕಿನ ಮಾರನಾಳ ಗ್ರಾಮದಲ್ಲಿನ ಬೆಳೆ ಹಾನಿ ಸಮೀಕ್ಷೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬರದಿಂದಾಗಿ ಜಿಲ್ಲೆಯಲ್ಲಿ ಮುಂಗಾರಿನಲ್ಲಿನ ಬೆಳೆಗಳಾದ ಹತ್ತಿ, ಜೋಳ, ಸಜ್ಜಿ, ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕುರಿತು ಕಂದಾಯ ಸಚಿರೊಂದಿಗೆ ಚರ್ಚಿಸಿದ್ದು ಎಸ್‌ಡಿಆರ್‌ಎಫ್ ಅನುದಾನದಲ್ಲಿ ಹಣ ನೀಡುವದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈಗ ನಡೆಸಿರುವ ಸಮೀಕ್ಷೆ ಪ್ರಕಾರ ಬರಗಾಲದಿಂದಾಗಿ (ಮುಂಗಾರು) ೨.೧೫ ಲಕ್ಷ ಹೆಕ್ಟೇರ ಬೆಳೆ ಹಾನಿಯಾಗಿದೆ. ಕಳೆದ ೧೫ ದಿನಗಳ ಹಿಂದಾದ ಅಕಾಲಿಕ ಮಳೆಯಿಂದ ಭತ್ತ (ಆರ್‌ಎನ್‌ಆರ್ ತಳಿಯ) ೫೦೦೧ ಹೆಕ್ಟೇರ ಹಾನಿಯಾಗಿದೆ ಎಂದು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಕೆರೆಯಲ್ಲಿನ ಮೀನುಗಳು ಸಾವನ್ನಪ್ಪುತ್ತಿದ್ದು ಇದಕ್ಕೆ ಕೆಮಿಕಲ್ ಕಾರ್ಖಾನೆಯವರು ಹೊರ ಹಾಕುವ ತ್ಯಾಜ್ಯದಿಂದ ಸಾವನ್ನಪ್ಪುತ್ತಿದ್ದಾವೆ ಎಂಬ ದೂರುಗಳಿಗೆ ಈ ಕುರಿತು ಕೆರೆಯಲ್ಲಿನ ನೀರಿನ ಗುಣಮಟ್ಟವನ್ನು ಮೂರನೆ ವ್ಯಕ್ತಿಯಿಂದ ತಪಾಸಣೆಗೆ ಜಿಲ್ಲಾಧಿಕಾರಿಗಲೀಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಮಾನವಿ ತಾಲೂಕಿನಲ್ಲಿ ಫಸಲ್ ಭೀಮಾ ಯೋಜನೆ ಈ ಹಿಂದೆ ೨೪ ಲಕ್ಷ ಎಂದು ತಿಳಿಸಿದ್ದಿರಿ ಆದರೆ ಅದು ಒಂದು ಕೋಟಿ ರೂಗಳಿಗೂ ಹೆಚ್ಚು ಅಕ್ರಮವಾಗಿದೆ ಎನ್ನುವ ಮಾತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರೀಯಿಸಿ ಈ ಪ್ರಕರಣ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಹಂಪಯ್ಯ ನಾಯಕ್, ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ.ಎಲ್., ಜಿಪಂ ಸಿಇಒ ರಾಹುಲ್ ತುಕಾರಾಂ ಪಾಡ್ವೆ ಇತರ ಅಧಿಕಾರಿಗಳಿದ್ದರು.