ಹೊಸದಿಗಂತ ವರದಿ, ಮದ್ದೂರು :
ಚಲನಚಿತ್ರನಟ ದರ್ಶನ್ ಹಾಗೂ ನನ್ನ ನಡುವಿನ ಭೇಟಿ ಕೇವಲ ಭೋಜನಕೂಟಕ್ಕಷ್ಟೇ ಸೀಮಿತವಾಗಿದೆಯೇ ಹೊರತು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಶಾಸಕ ಕೆ.ಎಂ. ಉದಯ್ ಬುಧವಾರ ಹೇಳಿದರು.
ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಚಿತ್ರನಟ ದರ್ಶನ್ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಶಾಸಕರು ಪ್ರತಿಕ್ರಿಯೆ ನೀಡಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಂತರ ನನ್ನ ರಾಜಕೀಯ ಜಂಜಾಟದಿಂದಾಗಿ ಬಿಸಿಯಾಗಿದ್ದೆ, ಹೀಗಾಗಿ ದರ್ಶನ್ ಮತ್ತು ನನ್ನ ಇಬ್ಬರ ನಡುವೆ ಭೇಟಿ ಸಾಧ್ಯವಾಗಿಲ್ಲ. ಮಂಗಳವಾರ ರಾತ್ರಿ ನನ್ನ ಸ್ವಗ್ರಾಮಕ್ಕೆ ಭೇಟಿ ನೀಡಿದ್ದ ದರ್ಶನ್, ಚುನಾವಣೆ ಗೆಲುವು ಮತ್ತು ದೀಪಾವಳಿ ಶುಭಾಶಯ ಕೋರಿದರು. ನಂತರ ಭೋಜನ ಸ್ವೀಕರಿಸಿ ತೆರಳಿದ್ದಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ದರ್ಶನ್ ಮತ್ತು ನನ್ನ ನಡುವೆ ಬಹಳ ವರ್ಷಗಳಿಂದ ಆತ್ಮೀಯತೆ ಇದೆ. ನಾನು ರಾಜಕೀಯಕ್ಕೆ ಬರುವ ಹಿಂದಿನಿಂದಲೂ ನನ್ನ ಸ್ನೇಹಿತರಾಗಿದ್ದಾರೆ ಎಂದು ಉದಯ್ ಹೇಳಿದರು.