ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಮುನಿಸಿಕೊಂಡಿದ್ದು, ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಇದರಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಡಿಸಿಎಂ ಜಿ. ಪರಮೇಶ್ವರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಬರವನ್ನು ನಾವು ನೋಡುತ್ತಿದ್ದೇವೆ. 1976ರಲ್ಲಿ ಭೀಕರ ಬರಗಾಲ ಎದುರಾಗಿತ್ತು. ಅದಾದನಂತರ ನಾವು ಈಗ ಬರವನ್ನು ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. 89 ತೀವ್ರ ಬರ ಪೀಡಿತ ಹಾಗೂ 12 ತಾಲೂಕುಗಳನ್ನು ಸಾಮಾನ್ಯ ಬರಪೀಡಿತ ಎಂದು ವರ್ಗೀಕರಿಸಿದ್ದೇವೆ ಎಂದಿದ್ದಾರೆ.

ಘೋಷಣೆ ಮಾಡಿದ್ದು ಹೇಗೆ?
ಕೇಂದ್ರ ಸರ್ಕಾರದ ಬರ ಕೈಪಿಡಿಯ ಮಾರ್ಗಸೂಚಿಯಂತೆ ಟ್ರಿಗರ್ ಒನ್ ಅನ್ವಯ ಬರಪೀಡಿದ ಜಿಲ್ಲೆಗಳೆಂದು ಘೋಷಣೆ ಮಾಡಲಾಗಿದೆ. ಈ ಮಾರ್ಗಸೂಚಿ ಅನ್ವಯ 134 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬಹುದಿತ್ತು. ಆದರೆ ಬೆಳೆಗಳ ಸ್ಥಿತಿಗತಿ, ತೇವಾಂಶ ಮತ್ತಿತರ ಅಂಶಗಳನ್ನು ಆಧರಿಸಿ ‘ಗ್ರೌಂಡ್ ಟ್ರೂಥಿಂಗ್’ ಮಾಡಿದ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದಿದ್ದಾರೆ.
ಶೇ.30 ರಷ್ಟು ಮಳೆ ಕೊರತೆ
ಇನ್ನು ಜೂನ್ ಒಂದರಿಂದ ವಾಡಿಕೆಯಂತೆ ಮಳೆಗಾಲ ಆರಂಭವಾಗಬೇಕಿತ್ತು. ಆದರೆ ಆಗಸ್ಟ್ ಅಂತ್ಯವಾಗುತ್ತಿದ್ದರೂ ಮಳೆಯ ಸುಳಿವೇ ಇಲ್ಲ. ವಾಡಿಕೆಯಂತೆ 666 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 465 ಮಿ.ಮೀ ಮಳೆಯಾಗಿದ್ದು, ಶೇ.30 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.35, ಉತ್ತರ ಒಳನಾಡಿನಲ್ಲಿ ಶೇ.31, ಕರಾವಳಿಯಲ್ಲಿ ಶೇ.24 ರಷ್ಟು ಮಳೆ ಕೊರತೆ ದಾಖಲಾಗಿದೆ. ಒಟ್ಟಾರೆ ರಾಜ್ಯದ 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆ ವ್ಯಾಪ್ತಿಯಲ್ಲಿದ್ದು, 134 ತಾಲೂಕುಗಳು ಸತತ 3-4 ವಾರಗಳ ಕಾಲ ಒಣಹವೆ ಎದುರಿಸಿವೆ ಎಂದಿದ್ದಾರೆ.



