ಪಾಕಿಸ್ತಾನದಲ್ಲಿ ಪ್ರವಾಹ ತಾಂಡವ: 150 ಮಂದಿ ಬಲಿ, ಆಸ್ತಿಪಾಸ್ತಿಗಳಿಗೆ ಹಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆಯಿಂದ ಪಾಕಿಸ್ತಾನದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಒಂದು ತಿಂಗಳೊಳಗೆ 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಮಂದಿ ನಾಪತ್ತೆಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದ್ದು, 91 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 150ಮಂದಿ ಸಾವನ್ನಪ್ಪಿದ್ದು, 163 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ.

ಧಾರಾಕಾರ ಮಳೆಯಿಂದಾಗಿ ಮನೆ, ರಸ್ತೆ, ಸೇತುವೆಗಳು ಹಾನಿಗೀಡಾಗಿವೆ. ವಿದ್ಯುತ್ ಕೇಂದ್ರಗಳು ಹಾನಿಗೊಳಗಾಗಿದ್ದರಿಂದ ದೇಶಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ದೇಶದ ಅತಿದೊಡ್ಡ ದಕ್ಷಿಣ ಬಂದರು ನಗರವಾದ ಕರಾಚಿಯಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ದೇಶಾದ್ಯಂತ 1000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ದೋಣಿಗಳ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ರಸ್ತೆಗಳೆಲ್ಲಾ ನದಿಗಳಂತಾಗಿದ್ದು, ಈ ಸಮಯದಲ್ಲಿ ವಾಹನಗಳಿಗಿಂತ ದೋಣಿಗಳ ಅವಶ್ಯಕತೆಯಿದೆ ಎಂದಿದ್ದಾರೆ ಸಂತ್ರಸ್ತರು.

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಳೆಯಿಂದಾಗಿ ಇದುವರೆಗೆ 63 ಜನರು ಸಾವನ್ನಪ್ಪಿದ್ದಾರೆ. ಸಿಂಧೂ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲೂ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಬಹುತೇಕ ಇದೇ ಪರಿಸ್ಥಿತಿ ಇದೆ. ಹವಾಮಾನ ವೈಪರೀತ್ಯವೇ ಭಾರಿ ಮಳೆಗೆ ಕಾರಣ ಎಂದು ತಜ್ಞರು ವರದಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!