ಹೊಸದಿಗಂತ ವರದಿ, ಶಿವಮೊಗ್ಗ:
ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ ಸಲ್ಲಿಸಿದ್ದಾರೆ.
ಬೈಂದೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಎರಡನೇ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನವಾಗಿದೆ. ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಯಾತಾರ್ಥಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಬೈಂದೂರಿಗೆ ವಿಮಾನ ನಿಲ್ದಾಣ ಮಂಜೂರು ಮಾಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಹಿಂದೆಯೇ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಅದಕ್ಕೆ ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಹಾಗೂ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಬಂದಲ್ಲಿ ಶೀಘ್ರ ವಿಮಾನ ನಿಲ್ದಾಣ ಮಂಜೂರು ಮಾಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ತಿಳಿಸಿದ್ದಾರೆ. ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅತೀ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಅರಣ್ಯ ಇಲಾಖೆಯ ವಿಸ್ತರಣಾ ಬ್ಲಾಕ್ ಸ್ಥಳ ಲಭ್ಯವಿದೆ.
ಈಗಾಗಲೇ ಕೆಎಸ್‌ಐಐಡಿಸಿ ವತಿಯಿಂದ ಸರ್ವೆ ನಡೆದು ಉಡುಪಿ ಜಿಲ್ಲಾಧಿಕಾರಿಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.