ಮೂಡುಶೆಡ್ಡೆ ಗಲಭೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಚೋದನೆಯೇ ಕಾರಣ: ಕೋಟ್ಯಾನ್ ಆರೋಪ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮತದಾನದ ಬಳಿಕ ಬುಧವಾರ ಮೂಡುಶೆಡ್ಡೆಯಲ್ಲಿ ನಡೆದ ಘರ್ಷಣೆಗೆ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರೇ ಕಾರಣ. ಬಿಜೆಪಿ ಬೂತ್ ಎದುರು ಮಿಥುನ್ ರೈ ಅವರು ಕಾರು ನಿಲ್ಲಿಸಿ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದರು.

ಬುಧವಾರ ರಾತ್ರಿ 7.30ರ ವೇಳೆಗೆ ಮೂಡುಶೆಡ್ಡೆ ಮತದಾನ ಕೇಂದ್ರದಿಂದ ಮತಯಂತ್ರಗಳನ್ನು ವಾಪಸ್ ಕೊಂಡೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್ ಬಳಿ ಭಾರತ ಮಾತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಿಥುನ್ ರೈ, ಬಿಜೆಪಿ ಬೂತ್ ಬಳಿ ಕಾರು ನಿಲ್ಲಿಸಿ, ಕಾರ್‌ನಿಂದ ಇಳಿದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಮಿಥುನ್ ರೈ ಅವರು ಬಿಜೆಪಿ ಬೂತ್ ಬಳಿ ಬಂದು ಕಾರು ನಿಲ್ಲಿಸಿದ್ದು ಏಕೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಮೂಡುಶೆಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಾವುದೇ ಗಲಾಟೆ ಮಾಡಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಕಲ್ಲು ಎಸೆದಿದ್ದಾರೆ ಎಂಬುದೂ ತಪ್ಪು ಮಾಹಿತಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರೇ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ಬಿಸಾಡಿದ್ದಾರೆ ಎಂದರು.

ಮಿಥುನ್ ರೈ ಸಂಯಮ ವಹಿಸಿ ಸ್ವಲ್ಪ ದೂರ ಹೋಗಿ ಕಾಂಗ್ರೆಸ್ ಬೂತ್ ಎದುರೇ ಕಾರು ನಿಲ್ಲಿಸಿದ್ದರೆ ಅಹಿತಕರ ಘಟನೆಗಳಿಗೆ ಆಸ್ಪದವೇ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಕಲ್ಲು ತೂರಾಟದಿಂದ ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಕಾಂಗ್ರೆಸಿಗರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನಾವಳಿಗೆ ಸಂಬಂಧಿಸಿದಂತೆ ಬಿಜೆಪಿ ಕೂಡ ಪೊಲೀಸರಿಗೆ ದೂರು ನೀಡಿದ್ದು, ಕಾನೂನಿನಂತೆ ಕ್ರಮ ಜರಗುಲಿದೆ ಎಂದು ಅವರು ಹೇಳಿದರು.

ಘಟನೆಯ ಪ್ರತ್ಯಕ್ಷದರ್ಶಿ ಕವಿತಾ ದಿನೇಶ್ ಮಾತನಾಡಿ, ಕಳೆದ 18 ವರ್ಷದಿಂದ ಚುನಾವಣೆ ವೇಳೆ ಮೂಡುಶೆಡ್ಡೆಯಲ್ಲಿ ಕಾರ್ಯನಿರ್ವಹಿಸಿದ್ದು, ಮತಯಂತ್ರ ವಾಪಸ್ ತೆರಳುವಾಗ ಪ್ರತಿ ಬಾರಿ ಘೋಷಣೆ ಕೂಗುತ್ತಿದ್ದೆವು. ಬುಧವಾರವೂ ಘೋಷಣೆ ಕೂಗಿದ್ದೇವೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಿಥುನ್ ರೈ ಬಿಜೆಪಿ ಕಾರ್ಯಕರ್ತರನ್ನು ತಳ್ಳಾಟ ನಡೆಸಿದ್ದಾರೆ. ಅವರ ಬೆಂಬಲಿಗರು ಕೂಡ ಬಿಜೆಪಿ ಕಾರ್ಯಕರ್ತರು, ಮಹಿಳೆಯರು ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಿದರು.

ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಪ್ರಮುಖರಾದ ಉಮೇಶ್ ಜಾರ, ಹರಿಪ್ರಸಾದ್ ಶೆಟ್ಟಿ, ಜಯಶ್ರೀ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!