ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗುಸೇತುವೆ ಕುಸಿದು 132ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ತೂಗುಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಪುನಃ ಮುಕ್ತಗೊಳಿಸುವ ಮುನ್ನ ಪುರಸಭೆಯಿಂದ ಅರ್ಹತಾ ಪ್ರಮಾಣಪತ್ರ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶತಮಾನಗಳಷ್ಟು ಹಳೆಯದಾದ ಸೇತುವೆ ಮುರಿದು ಬಿದ್ದು, ಮಹಿಳೆಯರು, ಪುರುಷರು, ಮಕ್ಕಳು ಹಾಗೂ ವೃದ್ಧರು ಪ್ರಾಣಬಿಟ್ಟಿದ್ದಾರೆ. 19ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ನವೀಕರಣಕ್ಕಾಗಿ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸಾರ್ವಜನಿಕರ ಬಳಕೆಗೆ ಸೇತುವೆ ಮುಕ್ತವಾಗಿತ್ತು. ಸೇತುವೆ ನಿರ್ವಹಣೆಯನ್ನು ಒರೆವಾ ಕಂಪನಿಗೆ ನೀಡಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ನವೀಕರಣ ಆರಂಭವಾಗಿತ್ತು. ಸ್ಥಳೀಯ ಸಂಸ್ಥೆಯು ಇನ್ನೂ ಅರ್ಹತಾ ಪ್ರಮಾಣಪತ್ರ ನೀಡಿರಲಿಲ್ಲ. ನಮ್ಮ ಗಮನಕ್ಕೆ ಬಾರದೇ ಸೇತುವೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್ ಸಿನ್ಹ ಝಾಲ ಹೇಳಿದ್ದಾರೆ.
ಭಾನುವಾರ ರಜೆ ಕಾರಣ ಸಾಕಷ್ಟು ಮಂದಿ ಸೇತುವೆ ಮೇಲೇರಿದ್ದರು. ಭಾರೀ ಜನ ಇದ್ದ ಕಾರಣ ಸೇತುವೆ ಭಾರ ತಡೆದಿಲ್ಲ. ಸಂಜೆ ವೇಳೆಗೆ ಸೇತುವೆ ಮುರಿದು ಬಿದ್ದಿದ್ದು, ಮಧ್ಯಭಾಗದಲ್ಲಿದ್ದ ಎಲ್ಲರೂ ನದಿಗೆ ಬಿದ್ದಿದ್ದಾರೆ. ಕೆಲವರು ಹಗ್ಗ ಹಿಡಿದು ನೇತಾಡುತ್ತಿದ್ದರು ಎಂದಿದ್ದಾರೆ.