ಯುದ್ಧ ಸಂತ್ರಸ್ತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ 10ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ರಷ್ಯದಿಂದ ದಾಳಿಗೊಳಗಾಗುತ್ತಿರುವ ಉಕ್ರೇನ್‌ನಲ್ಲಿ ಕರ್ನಾಟಕದ 10ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರ ಸುರಕ್ಷತೆಗಾಗಿ ಕರ್ನಾಟಕ ಮತ್ತು ಭಾರತ ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸುಮಾರು 100 ಮಂದಿ ಭಾರತೀಯ ವಿದ್ಯಾರ್ಥಿಗಳು ವಿಮಾನ ನಿಲ್ದಾಣ ತಲುಪುವಾಗ ರಷ್ಯ ಮತ್ತ ಉಕ್ರೇನ್ ಯುದ್ಧ ಪ್ರಾರಂಭವಾಗಿದೆ. ವಿಮಾನ ಹಾರಾಟ ಸ್ಥಗಿತಗೊಂಡಿದೆ. ಇದರಲ್ಲಿ ಹತ್ತಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳೂ ಇದ್ದಾರೆ. ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದರು.

ಉಕ್ರೇನ್‌ನಲ್ಲಿರುವ ಇಂಡಿಯನ್ ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಸರಕಾರದ ಮುಖ್ಯ ಕಾರ್ಯದರ್ಶಿದವರು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ. ಎಂಬೆಸ್ಸಿಗೆ ಈಗಾಗಲೇ ಮಾಹಿತಿ ಕಳುಹಿಸಿದ್ದಾರೆ. ಎಂಬೆಸ್ಸಿಯವರು ಮಕ್ಕಳು ಎಲ್ಲಿಗೆ ಬರಬೇಕು, ಎಲ್ಲಿ ಸುರಕ್ಷತೆ ಇದೆ ಎಂಬ ಮಾಹಿತಿಯನ್ನೂ ಕೊಟ್ಟಿದ್ದಾರೆ. ವಿಮಾನ ಹಾರಾಟ ಮತ್ತೆ ಪ್ರಾರಂಭವಾದಾಗ, ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಕೇಂದ್ರ ಸರಕಾರದೊಂದಿಗೆ ನಿರಂತರ ಸಂಪರ್ಕವನ್ನಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.

ಈ ಮೊದಲೇ ಉಕ್ರೇನ್ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಅಲ್ಲಿರುವ ವಿದ್ಯಾರ್ಥಿಗಳು, ನಾಗರಿಕರು ಭಾರತಕ್ಕೆ ಮರುಳುತ್ತಿದ್ದರು. ವಿದ್ಯಾರ್ಥಿಗಳು ಅವರವರ ಅನುಕೂಲಕ್ಕೆ ತಕ್ಕಂತೆ ಬ್ಯಾಚ್‌ಗಳಲ್ಲಿ ಸ್ವದೇಶಕ್ಕೆ ಮರಳುತ್ತಿದ್ದರು. ಇದು ಕೊನೆಯ ಬ್ಯಾಚ್ ಉಳಿದಿತ್ತು. ಇವರು ಕೂಡ ವಿಮಾನ ನಿಲ್ದಾಣಕ್ಕೆ ಬಂದಾಗಿತ್ತು. ಆದರೆ ಅಷ್ಟರಲ್ಲಾಗಲೇ ಯುದ್ಧ ಪ್ರಾರಂಭವಾಗಿದೆ ಎಂದು ಹೇಳಿ ಸಿಎಂ, ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಸಂಪರ್ಕ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇನೆ. ಸಚಿವರು ಸಭೆಯಲ್ಲಿದ್ದಾರೆ, ಸಭೆ ಮುಗಿದ ತಕ್ಷಣ ಅವರೊಂದಿಗೆ ಮಾತನಾಡುತ್ತೇನೆ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!